ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ – 3ನೇ ಆರೋಪಿಗೆ ಷರತ್ತುಬದ್ಧ ಜಾಮೀನು

ಉಡುಪಿ: ಇಡೀ ದೇಶದ ಗಮನ ಸೆಳೆದಿದ್ದ ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಗೆ ಉಡುಪಿ ಕೋರ್ಟ್ ಜಾಮೀನು ಕೊಟ್ಟಿದೆ. ಆರೋಪಿ ನಿರಂಜನ ಭಟ್ ತಂದೆ ಮೃತಪಟ್ಟಿದ್ದು, ಕೋರ್ಟ್ ಷರತ್ತುಬದ್ಧ ಜಮೀನು ಮಂಜೂರು ಮಾಡಿದೆ.

ಉಡುಪಿಯ ಬಹುಕೋಟಿ ಉದ್ಯಮಿ, ವಿದೇಶದಲ್ಲಿ ಸೂಪರ್ ಮಾರ್ಕೆಟ್ ಹೊಂದಿದ್ದ ಭಾಸ್ಕರ ಶೆಟ್ಟಿಯನ್ನು ತಾಯಿ ಮಗ ಸೇರಿ ಕೊಲೆಗೈದ ಪ್ರಕರಣ ಇದಾಗಿದ್ದು, ಮೂರನೇ ಆರೋಪಿ ನಿರಂಜನ ತನ್ನ ಮನೆಯ ಹೋಮಕುಂಡದಲ್ಲಿ ಮೃತದೇಹ ಸುಡಲು ಸಹಾಯ ಮಾಡಿದ್ದ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಿರಂಜನ ಭಟ್‍ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ.

ಹೋಮಕುಂಡದಲ್ಲಿ ಸುಟ್ಟಿದ್ದರು
ಜುಲೈ 28, 2016ರಲ್ಲಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾಗಿತ್ತು. ಭಾಸ್ಕರ ಶೆಟ್ಟಿಯ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಸೇರಿ ಇಂದ್ರಾಳಿಯ ಸಮೀಪದ ತಮ್ಮ ಮನೆಯಲ್ಲಿ ಕೊಲೆ ಮಾಡಿದ್ದರು. ಮನೆಯಿಂದ 25 ಕಿಮೀ ದೂರ ಕಾರಲ್ಲಿ ಸಾಗಿಸಿದ್ದರು. ರಾಜೇಶ್ವರಿ ಪ್ರಿಯಕರ ನಿರಂಜನ ಹೋಮಕುಂಡದಲ್ಲಿ ಸುಡಲು ಸಹಾಯ ಮಾಡಿದ್ದ. ನಿರಂಜನನ ಮನೆಯಲ್ಲೇ ಕುಂಡ ತಯಾರಿಸಿ ಮೃತದೇಹ ಸುಡಲಾಗಿತ್ತು.

ಭಾಸ್ಕರ ಶೆಟ್ಟಿ ಮಿಸ್ಸಿಂಗ್ ಮಿಸ್ಟರಿ ಕೊಲೆಯೆಂದು 10 ದಿನದ ನಂತರ ಸಾಭೀತಾಗಿತ್ತು. ಮೂರು ಪ್ರಮುಖ ಆರೋಪಿಗಳು ಬಂಧನಕ್ಕೊಳಗಾಗಿದ್ದು, ಪ್ರಕರಣ ಕೋರ್ಟಿನಲ್ಲಿದೆ. ಇದೀಗ ಮೂರನೇ ಆರೋಪಿ ತಂದೆಯ ಸಾವಿನ ಹಿನ್ನೆಲೆಯಲ್ಲಿ ಕೋರ್ಟಿನಲ್ಲಿ ಜಾಮೀನಾಗಿದೆ. ಆತನ ತಂದೆ ಶ್ರೀನಿವಾಸ ಭಟ್ ಮಾನಸಿಕ ಖಿನ್ನತೆ ಮತ್ತು ಅನಾರೋಗ್ಯದಿಂದ ಸಾವಿಗೀಡಾಗಿದ್ದು, 14 ದಿನಗಳ ಮಟ್ಟಿಗೆ ಐದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಆಧಾರದಲ್ಲಿ ಉಡುಪಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನನ್ನು ಮಂಜೂರು ಮಾಡಿದೆ.

Comments

Leave a Reply

Your email address will not be published. Required fields are marked *