ಉದ್ಯಮಿಯಿಂದ ಕೇವಲ 1 ರೂಪಾಯಿಗೆ ಆಕ್ಸಿಜನ್ ಸಿಲಿಂಡರ್

ಲಕ್ನೋ: ಕೊರೊನಾ ದಿಂದ ಬಳಲುತ್ತಿರುವ ಸೋಂಕಿತರು ಆಕ್ಸಿಜನ್ ಇಲ್ಲದೆ ಪ್ರಾಣವನ್ನು ಬಿಡುತ್ತಿದ್ದಾರೆ. ಆದರೆ ಉದ್ಯಮಿಯೊಬ್ಬರು ಆಕ್ಸಿಜನ್  ಸಿಲಿಂಡರ್‌ಗಳನ್ನು ಕೇವಲ 1 ರೂಪಾಯಿಗೆ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಉತ್ತರ ಪ್ರದೇಶದ ಹಮಿರ್​ಪುರ್​​  ಜಿಲ್ಲೆಯ ಉದ್ಯಮಿ ಮನೋಜ್ ಗುಪ್ತಾ ಕೇವಲ 1 ರೂ.ಗೆ ಸಿಲಿಂಡರ್ ರೀಫಿಲ್ ಮಾಡಿಕೊಡುವ ಮೂಲಕ ಸೋಂಕಿತರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ಮನೋಜ್ ಗುಪ್ತಾರ ಮಾನವೀಯತೆಯಿಂದ ನಿತ್ಯ ಅದೆಷ್ಟೋ ಸೋಂಕಿತರು ಸಾವಿನ ದವಡೆಯಿಂದ ಪಾರಾಗುತ್ತಿದ್ದಾರೆ.

ದೇಶದಲ್ಲಿ ಕೊರೊನಾ 2ನೇ ಅಲೆಯ ಭೀಕರತೆ ತಾಂಡವವಾಡುತ್ತಿದೆ. ಆಕ್ಸಿಜನ್ ಕೊರತೆಯಿಂದ ಸೋಂಕಿತರು ಉಸಿರು ಚೆಲ್ಲುತ್ತಿದ್ದಾರೆ. ಆಕ್ಸಿಜನ್ ಪೂರೈಕೆ ಸಮಸ್ಯೆಯನ್ನು ನೀಗಿಸಲು ಸರ್ಕಾರಗಳು ಹರಸಾಹಸಪಡುತ್ತಿವೆ. ಇಂಥ ಸಂಕಷ್ಟದ ಸಮಯದಲ್ಲಿ ಮನೋಜ್ ಅವರು ಮಾಡುತ್ತಿರು ಈ ಸಹಾಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


1 ರೂಪಾಯಿಗೆ ಆಕ್ಸಿಜನ್ ತುಂಬಿಸಿಕೊಡುವ ಗುಪ್ತಾರ ನಿರ್ಧಾರ ಹಿಂದೆಯೂ ಒಂದು ಮನಕಲಕುವ ಘಟನೆಯಿದೆ. ಕಳೆದ ವರ್ಷ ಮನೋಜ್ ಗುಪ್ತಾ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ನಾನು ಅನುಭವಿಸಿದ ಯಾತನೆ ಮತ್ತೊಬ್ಬರು ಅನುಭವಿಸಬಾರದು ಎಂಬ ಉದ್ದೇಶದಿಂದಲೇ ಈ ಕೆಲಸಕ್ಕೆ ಮುಂದಾದೆ ಎಂದು ಗುಪ್ತಾ ಅವರು ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕಾರ್ಖಾನೆಯಲ್ಲಿ ನಿತ್ಯ 1 ಸಾವಿರ  ಸಿಲಿಂಡರ್‌ಗಳಿಗೆ ಆಕ್ಸಿಜನ್ ತುಂಬಬಹುದು. ಸೋಂಕಿತರ RTPCR ರಿಪೋರ್ಟ್​ ನೋಡಿ ಆಕ್ಸಿಜನ್​ ಸಿಲಿಂಡರ್​ ರಿಫೀಲ್​ ಮಾಡಿಕೊಡಲಾಗುತ್ತಿದೆ. ಕೇವಲ 1 ರೂಪಾಯಿ ಪಡೆದು ನಾನು ನಿತ್ಯ 1 ಸಾವಿರ ಸಿಲಿಂಡರ್‌ಗಳಿಗೆ  ಆಕ್ಸಿಜನ್ ತುಂಬಿ ಕೊಡುವ ಕೆಲಸ ಮಾಡುತ್ತಿದ್ದೇನೆ ಎಂದು ಗುಪ್ತಾ ಅವರು ಹೆಮ್ಮೆಯಿಂದ ಹೇಳಿದ್ದಾರೆ.

ಹಣ ಕೊಡಲು ಸಾಧ್ಯವಾಗದ ಬಡವರು ದೂರದೂರುಗಳಿಂದ ಇಲ್ಲಿಗೆ ಆಗಮಿಸಿ ಆಕ್ಸಿಜನ್ ಸಿಲಿಂಡರ್ ಪಡೆಯುತ್ತಿದ್ದಾರೆ. ಸಂಕಷ್ಟದಿಂದ ಬಂದ ಯಾರನ್ನೂ ಗುಪ್ತಾ ನಿರಾಸೆಗೊಳಿಸದೆ  ಸಾಮರ್ಥ್ಯ ಇರುವಷ್ಟು ಆಕ್ಸಿಜನನ್ನು ರೀಫಿಲ್ ಮಾಡಿ ಕೊಡುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ ಸಾವಿನ ಹಂಚಿನಲ್ಲಿದ್ದ ಅದೆಷ್ಟೋ ಸೋಂಕಿತರು ಇವರಿಂದ ಪಾರಾಗುತ್ತಿದ್ದಾರೆ.

Comments

Leave a Reply

Your email address will not be published. Required fields are marked *