ಉಡುಪಿಯಲ್ಲಿ ನಾಳೆಯಿಂದ ಖಾಸಗಿ, ಸರ್ಕಾರಿ ಬಸ್ ಸಂಚಾರ ಆರಂಭ

– ಕಾನೂನು ಪಾಲಿಸದಿದ್ದರೆ ಪ್ರಯಾಣಿಕರ ಮೇಲೂ ಕೇಸ್
– ಡಿಸಿ ಜಿ.ಜಗದೀಶ್ ಕಟ್ಟುನಿಟ್ಟಿನ ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆಯಿಂದ ಖಾಸಗಿ ಮತ್ತು ಸರ್ಕಾರಿ ಬಸ್ ಸಂಚಾರ ಆರಂಭವಾಗಲಿದೆ. ಜನತಾ ಕಫ್ರ್ಯೂ ಘೋಷಣೆಯಾದ ನಂತರ ಉಡುಪಿ ಜಿಲ್ಲೆಯಲ್ಲಿ ಯಾವುದೇ ಬಸ್ ಸಂಚಾರ ಇರಲಿಲ್ಲ. ಇದೀಗ ಕೆಲವು ಷರತ್ತುಗಳನ್ನು ವಿಧಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಮೇ 13ರ ಬೆಳಗ್ಗೆಯಿಂದ ಜಿಲ್ಲೆಯೊಳಗೆ ಖಾಸಗಿ ಮತ್ತು ಸರ್ಕಾರಿ ಬಸ್‍ಗಳು ಸಂಚಾರ ಆರಂಭಿಸಲಿವೆ. ಒಂದು ಬಸ್‍ನಲ್ಲಿ ಶೇ.50ರಷ್ಟು ಪ್ರಯಾಣಿಕರು ಮಾತ್ರ ಓಡಾಡಬಹುದು. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಮಾಸ್ಕ್ ಧರಿಸಿದ ಪ್ರಯಾಣಿಕರನ್ನು ಬಸ್ ಒಳಗೆ ಬಿಟ್ಟುಕೊಳ್ಳಬೇಡಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಬಸ್ ನಿರ್ವಾಹಕರಿಗೆ ಹಾಗೂ ಚಾಲಕರಿಗೆ ಸೂಚನೆ ನೀಡಿದ್ದಾರೆ.

ಮಾಸ್ಕ್ ತಲೆಗೆ ಹಾಕಿಕೊಳ್ಳುವುದು, ಕುತ್ತಿಗೆಗೆ ನೇತಾಡಿಸುವುದು ಮಾಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೆಎಸ್‍ಆರ್‍ಟಿಸಿಯ ಅಧಿಕಾರಿಗಳು ರೂಟ್ ಸರ್ವೇ ಮುಗಿಸಿದ್ದು, ಅಗತ್ಯ ಇರುವ ರಸ್ತೆಗಳಲ್ಲಿ ಬಸ್ ಗಳನ್ನು ಓಡಿಸಲಿದ್ದಾರೆ. ಖಾಸಗಿ ಬಸ್ ಮಾಲೀಕರ ಸಂಘದಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಕೆಲವು ಖಾಸಗಿ ಬಸ್‍ಗಳು ನಾಳೆ ರಸ್ತೆಗಿಳಿಯಲಿವೆ. ಸರ್ಕಾರದ ನಿಯಮಗಳನ್ನು ಪಾಲಿಸಿ, ಸ್ಯಾನಿಟೈಸರ್ ಕೊಟ್ಟು, ಮಾಸ್ಕ್ ಧರಿಸುವಂತೆ ನೋಡಿಕೊಂಡು ಬಸ್ ಓಡಿಸುವುದು ಕಷ್ಟ ಸಾಧ್ಯ ಎಂದು ಕೆಲ ಖಾಸಗಿ ಬಸ್ ಮಾಲೀಕರು ಬಸ್ ಓಡಿಸದಿರಲು ನಿರ್ಧಾರ ಮಾಡಿದ್ದಾರೆ. ಬಸ್ ಸಂಚಾರದ ಕುರಿತು ನಾಳೆ ಸ್ಪಷ್ಟ ಚಿತ್ರಣ ಸಿಗಲಿದೆ.

Comments

Leave a Reply

Your email address will not be published. Required fields are marked *