ಉಡುಪಿಯಲ್ಲಿ ಕೊರೊನಾ ಆತಂಕ- 950 ವರದಿಗಳ ನಿರೀಕ್ಷೆಯಲ್ಲಿ ಜಿಲ್ಲಾಡಳಿತ

ಉಡುಪಿ: ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಇಂದು ಫುಲ್ ಆತಂಕದಲ್ಲಿದೆ. ಜಿಲ್ಲೆಯಲ್ಲಿ ಏಕಾಏಕಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುವ ಆತಂಕವಿದೆ.

ಮುಂಬೈ ಜೊತೆ ಇಂದು ದುಬೈ ಪ್ರಯಾಣಿಕರ ವರದಿಯನ್ನು ಜಿಲ್ಲಾಡಳಿತ ನಿರೀಕ್ಷೆ ಮಾಡುತ್ತಿದೆ. ಡಿಎಚ್‍ಒ ಕೊಡುವ ಮಾಹಿತಿ ಪ್ರಕಾರ ಇಂದು 950ಕ್ಕೂ ಹೆಚ್ಚು ಮಂದಿಯ ವೈದ್ಯಕೀಯ ವರದಿ ಕೈಸೇರಲಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 22 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಓರ್ವ ಸೋಂಕಿತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ದುಬೈನಿಂದ ಬಂದಿದ್ದ 49 ಪ್ರಯಾಣಿಕರು, ನೆನ್ನೆ ಮಸ್ಕತ್‍ನಿಂದ ಬಂದ 21 ಪ್ರಯಾಣಿಕರ ಗಂಟಲು ದ್ರವ ತೆಗೆದು ಪರೀಕ್ಷೆಗೆ ನೀಡಲಾಗಿದೆ.

ಈ ಪೈಕಿ ದುಬೈ ಪ್ರಯಾಣಿಕರು ಮತ್ತು ಮುಂಬೈ ಸೋಂಕಿತರ ಪ್ರಾಥಮಿಕ ಸಂಪರ್ಕ ಇದ್ದವರ ವರದಿ ಬರುವ ಸಾಧ್ಯತೆ ಇದೆ. ಕ್ವಾರಂಟೈನ್ ಸೆಂಟರ್ ನಲ್ಲಿ ಇರುವ ಜ್ವರ ಶೀತದ ಲಕ್ಷಣ ಇರುವವರ ವರದಿಯೂ ಇಂದು ಕೈಸೇರಲಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಇರುವ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರ ವರದಿಗಳೂ ಬರುವ ಸಾಧ್ಯತೆ ಇದೆ.

ಉಡುಪಿ ಡಿಎಚ್‍ಒ ಡಾ. ಸುಧೀರ್ ಚಂದ್ರಸೂಡ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದು, ಸೋಂಕಿತರ ಸಂಪರ್ಕರವರು, ಜೊತೆ ಪ್ರಯಾಣಿಸಿದವರ ಗಂಟಲು ಮಾದರಿ ಮೊದಲು ತೆಗೆಯುತ್ತೇವೆ. ಮಹಾರಾಷ್ಟ್ರದ ರೆಡ್ ಝೋನ್ ನಿಂದ ಬಂದವರಿಗೂ ಆದ್ಯತೆ ಇದೆ. ವಿದೇಶದಿಂದ ಬಂದವರ ವೈದ್ಯಕೀಯ ಪರೀಕ್ಷೆ ಮಾಡುವ ಒತ್ತಡ ಕೂಡ ಇದೆ. ಮುಂದಿನ ಕೆಲ ದಿನಗಳು ಕಷ್ಟಕರ ಪರಿಸ್ಥಿತಿ ಇರಬಹುದು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದರು.

Comments

Leave a Reply

Your email address will not be published. Required fields are marked *