ಈ ಬಾರಿಯ ಬಜೆಟ್ ಬಕಾಸುರನ ಹೊಟ್ಟೆಗೆ ಹಿಡಿ ಅನ್ನ ಹಾಕಿದಂತಾಗಿದೆ: ಎಸ್ ಆರ್ ಪಾಟೀಲ್

ಬೆಂಗಳೂರು: ಸಿಎಂ ಯಡಿಯೂರಪ್ಪ ಮಂಡಿರುವ ಈ ಬಾರಿಯ ಬಜೆಟ್ ನಲ್ಲಿ ವಿಶೇಷವಾಗಿ ಏನು ಇಲ್ಲ. ಈ ಬಜೆಟ್‍ನ್ನು ಗಮನಿಸಿದರೆ ಬಕಾಸುರನ ಹೊಟ್ಟೆಗೆ ಅನ್ನ ಹಾಕಿದಂತಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಕಿಡಿಕಾರಿದ್ದಾರೆ.

ಸಿಎಂ ಬಜೆಟ್ ಮಂಡಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ ಆರ್ ಪಾಟೀಲ್, ಬಜೆಟ್ ನಲ್ಲಿ ನೀರಾವರಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಎತ್ತಿನಹೊಳೆ ಯೋಜನೆಗೆ ಹಣ ಮೀಸಲಿಟ್ಟಿಲ್ಲ. ಹಾಗಾಗಿ ಇದು ನಿರಾಶದಾಯಕ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಮೀಣಾಭಿವೃದ್ಧಿಗಾಗಿ ಶೇ.6 ರಷ್ಟು ಹಣ ಮೀಸಲಿಟ್ಟಿದ್ದಾರೆ. 31ನೇ ಜಿಲ್ಲೆಯಾದ ವಿಜಯನಗರಕ್ಕೆ ಒಂದು ರೂಪಾಯಿ ಹಣ ಮೀಸಲಿಟ್ಟಿಲ್ಲ, ಸರ್ಕಾರ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದೆ. ಮೋದಿಯವರು ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಹೇಳಿರುವುನ್ನು ರಾಜ್ಯ ಬಜೆಟ್ ನಲ್ಲಿ ಸಿಎಂ ಹೇಳಿದ್ದಾರೆ. ಆದರೆ ರೈತರಿಗೆ ಇನ್ನು ಹಣವನ್ನೇ ನೀಡಿಲ್ಲ. ಕೇವಲ ಇದು ಭಾಷಣದ ಬಜೆಟ್ ಆಗಿದೆ ಹೊರತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ಬಜೆಟ್ ಪೂರಕವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಜನ ವಿರೋಧಿ ಸರ್ಕಾರವಾಗಿದೆ. ಸರ್ಕಾರದ ವಿರುದ್ಧ ಮೇಲ್ಮನೆ ಮತ್ತು ಕೆಳಮನೆಯಲ್ಲಿ ಪ್ರತಿಭಟನೆ ಮಾಡಿದ್ದೇವೆ. ಯಡಿಯೂರಪ್ಪನವರ ಸರ್ಕಾರ ಜನ ಪರ ಸರ್ಕಾರವಲ್ಲ ಇದು ಸಿ ಡಿ ಸರ್ಕಾರವಾಗಿದೆ, ರಾಜ್ಯ ಸರ್ಕಾರಕ್ಕೆ ಬಜೆಟ್ ಮಂಡಣೆ ಮಾಡುವ ಅರ್ಹತೆ, ನೈತಿಕತೆ ಇಲ್ಲ. ಯಾವ ವರ್ಗಕ್ಕೂ ಈ ಬಾರಿಯ ಬಜೆಟ್ ಸಹಕಾರಿಯಾಗಿಲ್ಲ, ಸಮಾಜದ ಎಲ್ಲಾ ವರ್ಗದವರಿಗೂ ಇದು ನಿರಾಶದಾಯಕ ಬಜೆಟ್ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *