ಈ ಬಾರಿಯೂ ಮರುಕಳಿಸುತ್ತಾ ಕೊಡಗಿನಲ್ಲಿ ಪ್ರವಾಹ?

ಮಡಿಕೇರಿ: ಕೊಡಗು ಜಿಲ್ಲೆ ಕಳೆದ ಎರಡು ವರ್ಷಗಳಿಂದಲೂ ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ತತ್ತರಿಸಿ ಹೋಗಿದೆ. ಒಂದು ವರ್ಷ ಭೀಕರ ಭೂಕುಸಿತವಾಗಿದ್ದರೆ, 2019ರಲ್ಲಿ ದೊಡ್ಡ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ದುರಂತ ಈ ಬಾರಿಯೂ ಕೊಡಗಿಗೆ ಎದುರಾಗುತ್ತಾ ಅನ್ನೋ ಅನುಮಾನ ದಟ್ಟವಾಗಿದೆ.

ಈಗಾಗಲೇ ಮುಂಗಾರು ಮಾರುತಗಳು ಕೇರಳಕ್ಕೆ ಎಂಟ್ರಿಯಾಗಿದ್ದು, ಇನ್ನೆರಡು ದಿನಗಳಲ್ಲೇ ರಾಜ್ಯಕ್ಕೂ ಮಳೆ ಕಾಲಿಡಲಿದೆ. 2018ರಲ್ಲಿ ಮಡಿಕೇರಿ ತಾಲೂಕಿನಲ್ಲಿ ಭೀಕರ ಭೂಕುಸಿತಗಳು ಸಂಭವಿಸಿದ್ದರೆ, 2019ರಲ್ಲಿ ಮೂರು ತಾಲೂಕುಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಅಲ್ಲದೆ ವಿರಾಜಪೇಟೆ ತಾಲೂಕಿನಲ್ಲಿ ಭೂಕುಸಿತವೂ ಸಂಭವಿಸಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ರು. ಹೀಗಾಗಿಯೇ ಈ ಬಾರಿ ಜಿಲ್ಲಾಡಳಿತ ಮೂರು ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಿದೆ.

ಮತ್ತೊಂದೆಡೆ ಹವಾಮಾನ ಇಲಾಖೆ ಈ ಬಾರಿಯೂ ಪ್ರವಾಹ ಸೃಷ್ಟಿಯಾಗುತ್ತೇ ಅನ್ನೋ ಮುನ್ಸೂಚನೆ ನೀಡಿದೆ. ಇಷ್ಟೇ ಅಲ್ಲ ರಾಜ್ಯದ ಪ್ರಸಿದ್ದ ಸ್ವಾಮೀಜಿಯೊಬ್ಬರು ಕೊಡಗಿನಲ್ಲಿ ಭೂಕಂಪ ಆಗಿ ಇಡೀ ಜಿಲ್ಲೆಯೇ ನೆಲಸಮವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಹೀಗೆ ಹೇಳುತ್ತಲೇ ಕೊಡಗಿನ ಬೆಳೆಗಾರರ ಸಂಘವು ಆ ಸ್ವಾಮೀಜಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮತ್ತೊಂದೆಡೆ ಮಡಿಕೇರಿ ವಿಜಯ ವಿನಾಯಕ ದೇವಾಲಯದ ಅರ್ಚಕರು ಜೋತಿಷ್ಯಿಯೂ ಆಗಿರುವ ಕೃಷ್ಣ ಭಟ್ ಅವರು ಕೊಡಗಿನಲ್ಲಿ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಮಳೆಯಿಂದ ಅವಾಂತರ, ಅವಘಡಗಳು ಸಂಭವಿಸುತ್ತವೆ. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ ಎಂದು ಭವಿಷ್ಯ ಹೇಳಿದ್ದಾರೆ.

ಕಳೆದ ಎರಡು ವರ್ಷಗಳು ಜಿಲ್ಲೆಯಲ್ಲಿ ಮಳೆಯಿಂದ ಆದ ದುರಂತಗಳ ಅನುಭವ ಜಿಲ್ಲಾಡಳಿತಕ್ಕೆ ಇರುವುದರಿಂದ ಈಗಾಗಲೇ ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಸದ್ಯದಲ್ಲೇ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದೆ. ಮತ್ತೊಂದೆಡೆ ಜಿಲ್ಲಾಡಳಿತ ಕೂಡ ಅಗ್ನಿ ಶಾಮಕ ತಂಡ, ಡಿಆರ್ ಪೊಲೀಸ್, ಹೋಂ ಗಾರ್ಡ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತರಬೇತಿ ನೀಡಿದೆ.

ಕೊಡಗಿನ ಹಾರಂಗಿ ಜಲಾಶಯ, ಕೂಟ್ಟು ಹೊಳೆಗಳಲ್ಲಿ ಬೋಟ್‍ಗಳ ಮೂಲಕ ತಾಲೀಮು ನಡೆಸಿದೆ. ಅಷ್ಟೇ ಅಲ್ಲದೆ ಪ್ರಾಕೃತಿಕ ವಿಕೋಪ ಎದುಸಿರುವುದಕ್ಕಾಗಿ ಮೂರು ತಾಲೂಕುಗಳ ತಹಶೀಲ್ದಾರ್ ಗಳ ಖಾತೆಗೆ ತಲಾ 1 ಕೋಟಿ ರೂಪಾಯಿ ಹಣವನ್ನು ಹಾಕಲಾಗಿದೆ. ಅಲ್ಲದೆ ಪ್ರತೀ ಗ್ರಾಮ ಪಂಚಾಯಿತಿಗೆ 50 ಸಾವಿರ ರೂಪಾಯಿ, ಪ್ರತಿ ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂಪಾಯಿ ಮತ್ತು ನಗರ ಸಭೆಗೆ 2 ಲಕ್ಷ ರೂಪಾಯಿ ಹಣವನ್ನು ಹಾಕಲಾಗಿದೆ.

ಈ ಎಲ್ಲಾ ಸಿದ್ಧತೆಗಳನ್ನು ನೋಡಿದ್ರೆ ಕೊಡಗಿಗೆ ನಿಜವಾಗಿಯೂ ಮತ್ತೆ ಪ್ರವಾಹ ಎದುರಾಗುತ್ತಾ, ಪ್ರಾಕೃತಿಕ ವಿಕೋಪ ಉಂಟಾಗುತ್ತಾ. ಅದಕ್ಕಾಗಿಯೇ ಜಿಲ್ಲಾಡಳಿತ ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಅನ್ನೋ ಅನುಮಾನ ಮೂಡಿದೆ.

Comments

Leave a Reply

Your email address will not be published. Required fields are marked *