ಈ ಡಿಕೆ ಶಿವಕುಮಾರ್‌ ಹೆದರುವ ಮಗ ಅಲ್ಲ, ಯಾವುದಕ್ಕೂ ಜಗ್ಗಲ್ಲ: ಡಿಕೆಶಿ

ಬೆಂಗಳೂರು: ಈ ರಾಜಕಾರಣಕ್ಕೆ ಡಿಕೆ ಶಿವಕುಮಾರ್‌ ಹೆದರುವ ಮಗ ಅಲ್ಲ. ಇದು ಸದ್ಯಕ್ಕೆ ಮುಗಿಯುವುದಿಲ್ಲ. ಚುನಾವಣೆ ನಡೆಯುವವರೆಗೂ ಇರುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.

ಸಿಬಿಐ ದಾಳಿ ಬಳಿಕ ನಿವಾಸದಿಂದ ಹೊರಬಂದು ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಇರುವ ಎಲ್ಲ ಮಂತ್ರಿಗಳು ಹರಿಶ್ಚಂದ್ರನ ಮೊಮ್ಮಕ್ಕಳು. ಈಗ ನನಗೆ ರಾಜಕೀಯವಾಗಿ ತೊಂದರೆ ನೀಡುತ್ತಿದ್ದರಲ್ಲ ಅವರೆಲ್ಲ ಚೆನ್ನಾಗಿರಲಿ ಎಂದರು.

ನಾನು ನನ್ನ ಸಹೋದರ, ಕುಟುಂಬ ಮತ್ತು ಕಾಂಗ್ರೆಸ್ ಪಕ್ಷ ನಿಮ್ಮ ಅಭಿಮಾನಕ್ಕೆ ತಲೆ ಬಾಗಿ ವಂದಿಸುತ್ತೇನೆ. 2016 ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದರು. ಮತ್ತೆ ಇಡಿಯವರು ಕೇಸ್ ಹಾಕಿ ತಿಹಾರ್ ಜೈಲಿಗೆ ಕಳುಹಿಸಿದರು. ಈಗ 2020ರಲ್ಲಿ ಸಿಬಿಐ ಬಂದಿದೆ. ಯಾವುದಕ್ಕೂ ನಾನು ಜಗ್ಗುವ ವ್ಯಕ್ತಿಯಲ್ಲ ಎಂದು ಡಿಕೆಶಿ ಗುಡುಗಿದರು.  ಇದನ್ನೂ ಓದಿ: 2008ರಲ್ಲಿ 75 ಕೋಟಿ ಇದ್ದ ಡಿಕೆಶಿ ಆಸ್ತಿ ಈಗ 548 ಕೋಟಿ ರೂ.ಗೆ ಏರಿಕೆ!

ಅಡ್ವೋಕೇಟ್ ಜನರಲ್ ಬೇಡ ಎಂದರೂ ಸಿಬಿಐನವರು ಬಂದಿದ್ದಾರೆ. ಇದು ಸಿಬಿಐ ತನಿಖೆ ನಡೆಸುವ ಕೇಸಲ್ಲ. ಪಾಪ ಅವರಿಗೆ ಏನು ಒತ್ತಡ ಇರುತ್ತೊ ಏನೋ ಎಂದು ಪ್ರಶ್ನೆ ಮಾಡಿದರು.

ಬೆಳಗ್ಗೆಯಿಂದ ನೀವು ನನ್ನ ನಿವಾಸದ ಬಳಿ ಬಂದಿದ್ದೀರಿ. ನಾನುಂಟು ನೀವುಂಟು. ಭಕ್ತ ಉಂಟು, ಭಗವಂತ ಉಂಟು. ನಾಳೆಯಿಂದ ನಮ್ಮ ಕೆಲಸ ಮಾಡೋಣ. ಉಪಚುನಾವಣೆಯಲ್ಲಿ ಉತ್ತರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ರಾಜಕೀಯವಾಗಿ ತೊಂದರೆ ನೀಡಿ ನನ್ನ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಆದರೆ ಇದು ಸಾಧ್ಯವಿಲ್ಲ ಎಂದು ಕಾರ್ಯಕರ್ತರಿಗೆ ತಿಳಿಸಿದರು.

 

Comments

Leave a Reply

Your email address will not be published. Required fields are marked *