ಈರಣ್ಣ ಕಡಾಡಿಗೆ ರಾಜ್ಯಸಭಾ ಟಿಕೆಟ್ – ಬಿಜೆಪಿ ತಂತ್ರಗಾರಿಕೆ ಏನು?

ಬೆಳಗಾವಿ: ಬಿಜೆಪಿ ಹೈ ಕಮಾಂಡ್ ಬೆಳಗಾವಿಯ ಈರಣ್ಣ ಕಡಾಡಿ ಅವರಿಗೆ ರಾಜ್ಯಸಭಾ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಬೆಳಗಾವಿ ವಿಭಾಗದಲ್ಲಿ ಪಕ್ಷವನ್ನು ಬಲ ಪಡಿಸಲು ಮುಂದಾಗಿದೆ.

ಈರಣ್ಣ ಕಡಾಡಿ ಅವರು ಆರ್‍ಎಸ್‍ಎಸ್ ಹಾಗೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಆರ್‍ಎಸ್‍ಎಸ್ ಕಳುಹಿಸಿದ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಓಕೆ ಮಾಡಿತಾ ಎಂಬ ಪ್ರಶ್ನೆ ಎದ್ದಿದೆ. ಈ ಮೂಲಕ ಬೆಳಗಾವಿಯಿಂದ ಒಂದು ಸ್ಥಾನಕ್ಕೆ ಪ್ರಭಾಕರ್ ಕೋರೆ ಹಾಗೂ ರಮೇಶ ಕತ್ತಿ ನಡುವೆ ತೀವ್ರ ಪೈಪೋಟಿಗೆ ಹೈಕಮಾಂಡ್ ಫುಲ್‍ಸ್ಟಾಪ್ ಇಟ್ಟಿದೆ.

ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ ಈರಣ್ಣ ಕಡಾಡಿ ಅವರು 1966ರ ಜೂನ್ 1ರಂದು ಜನಿಸಿದ್ದು, 1989ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಅರಭಾಂವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಸಿದ ಅವರು, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಈರಣ್ಣ ಕಡಾಡಿ ಅವರು ಬಿಜೆಪಿಯ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿದ್ದರು. 1994ರಲ್ಲಿ ಅರಭಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮಾಜಿ ಸಚಿವ ವಿ.ಎಸ್.ಕೌಜಲಗಿ ಅವರ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. ಬಳಿಕ 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾಗಿದ್ದರು.

ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಈರಣ್ಣ ಕಡಾಡಿ ಸೇವೆ ಸಲ್ಲಿಸಿದ್ದಾರೆ. ಮೊದಲಿನಿಂದಲೂ ಆರ್‍ಎಸ್‍ಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಈರಣ್ಣ ಕಡಾಡಿ ಸದ್ಯ ಬಿಜೆಪಿ ವಿಭಾಗೀಯ ಪ್ರಭಾರಿ ಆಗಿದ್ದಾರೆ. ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *