ಈಗ ಇಲ್ಲ, ಮುಂದೆಯೂ ಬಾರದೇ ಇರಬಹುದು – ಲಸಿಕೆ ಬಗ್ಗೆ ಡಬ್ಲ್ಯೂಎಚ್‌ಒ ಮಾತು

ಜಿನೀವಾ: ಕೋವಿಡ್‌ 19ಗೆ ಸಂಬಂಧಿಸಿದಂತೆ ವಿಶ್ವದ ಹಲವೆಡೆ ಲಸಿಕೆ ಪ್ರಯೋಗ ನಡೆಯುತ್ತಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಮುಂದೆಯೂ ಈ ಸೋಂಕನ್ನು ತಡೆಗಟ್ಟಬಹುದಾದ ಲಸಿಕೆ ಬಾರದೇ ಇರಬಹುದು ಎಂದು ಎಚ್ಚರಿಕೆ ನೀಡಿದೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್, ಸದ್ಯಕ್ಕೆ ಸೋಂಕು ತಡೆಗಟ್ಟಬಲ್ಲ ಮ್ಯಾಜಿಕ್‌ ಲಸಿಕೆ ಇಲ್ಲ. ಮುಂದೆಯೂ ಲಸಿಕೆ ಬಾರದೇ ಇರಬಹುದು ಎಂದು ಎಚ್ಚರಿಕೆ ನೀಡಿದರು.

ಸೋಂಕಿತರ ಪರೀಕ್ಷೆ, ಸಂಪರ್ಕಿತರ ಪತ್ತೆ, ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದರ ಮೂಲಕ ವೈರಸ್‌ ಹರಡುವುದನ್ನು ನಿಲ್ಲಿಸಬಹುದು ಎಂದು ಮತ್ತೆ ಅದೇ ಹಳೇ ಸಾಲನ್ನು ಉಚ್ಚರಿಸಿದರು.

ಪ್ರಾಣಿಗಳಿಂದ ಕೋವಿಡ್‌ 19 ಹರಡಿರಬಹುದೇ ಎಂಬದುನ್ನು ತಿಳಿದುಕೊಳ್ಳಲು ಡಬ್ಲ್ಯೂಎಚ್‌ಒ ತಂಡ ಜುಲೈ 10 ರಂದು ಬೀಜಿಂಗ್‌ಗೆ ತೆರಳಿತ್ತು.

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂಡ ಈಗಾಗಲೇ ಚೀನಾದಲ್ಲಿ ಅಧ್ಯಯನ ಮಾಡುತ್ತಿದೆ. ಚೀನಾ ಮತ್ತು ವಿಶ್ವದ ಖ್ಯಾತ ವಿಜ್ಞಾನಿಗಳು ಕೋವಿಡ್‌19 ಮೂಲದ ಬಗ್ಗೆ ಅಧ್ಯಯನ ಮಾಡಲಿದ್ದಾರೆ. ಈಗಾಗಲೇ ವುಹಾನ್‌ನಲ್ಲಿ ಕೇಸ್‌ ಆರಂಭದಲ್ಲಿ ಪತ್ತೆಯಾದ ಬಗ್ಗೆ ಅಧ್ಯಯನ ಆರಂಭಗೊಂಡಿದೆ ಎಂದು ವಿವರಿಸಿದರು. ಈಗ ತಳಮಟ್ಟದ ಅಧ್ಯಯನ ನಡೆಯುತ್ತಿದ್ದು ದೀರ್ಘವಾದ ಅಧ್ಯಯನ ನಡೆಯಬೇಕಿದೆ ಎಂದು ತಿಳಿಸಿದರು.

ಚೀನಾ ವಿಜ್ಞಾನಿಗಳು ಹೇಳುವ ಪ್ರಕಾರ ಪ್ರಾಣಿಯಿಂದ ಈ ವೈರಸ್‌ ಮಾನವನಿಗೆ ಹರಡಿದೆ. ವುಹಾನ್‌ನಲ್ಲಿರುವ ಪ್ರಾಣಿಗಳ ವೆಟ್‌ ಮಾರುಕಟ್ಟೆಯಿಂದ ಇದು ಹರಡಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ವೈರಸ್‌ ಬಗ್ಗೆ ಅಧ್ಯಯನ ಮಾಡುತ್ತಿರುವ ವಿಶ್ವದ ಇತರೇ ವಿಜ್ಞಾನಿಗಳು ಇದು ವುಹಾನ್‌ ವೈರಾಲಜಿ ಲ್ಯಾಬ್‌ನಿಂದ ಸೋರಿಕೆಯಾದ ವೈರಸ್‌. ಈ ಕಾರಣಕ್ಕೆ ಚೀನಾ ಮೂಲವನ್ನು ಸರಿಯಾಗಿ ವಿವರಿಸದೇ ಪ್ರಪಂಚಕ್ಕೆ ತಪ್ಪು ಮಾಹಿತಿ ನೀಡಿದೆ ಎಂದು ಚೀನಾದ ವಾದವನ್ನು ತಿರಸ್ಕರಿಸಿದ್ದಾರೆ.

Comments

Leave a Reply

Your email address will not be published. Required fields are marked *