ಇಷ್ಟು ದಿನ ಅನುಭವಿಸಿದ್ದ ನೋವು ನನಗೆ ಗೊತ್ತು: ಮುನಿರತ್ನ

ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆ ಹಿನ್ನೆಲೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಬಿಜೆಪಿ ಮುಖಂಡ ಮುನಿರತ್ನ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕರಣ ನ್ಯಾಯಾಲಯದಲ್ಲಿದ್ದರಿಂದ ಇದರ ಬಗ್ಗೆ ನಾನು ಮಾತನಾಡಿರಲಿಲ್ಲ. ಇಂದು ಸುಪ್ರೀಂಕೋರ್ಟ್ ನ್ಯಾಯದ ಪರವಾಗಿ ತೀರ್ಪು ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ತೆಗೆದುಕೊಂಡ ಎಲ್ಲ ಮತಗಳು ಅಸಲಿ ಎಂದು ಹೇಳಿದೆ. ಮಾಧ್ಯಮ, ಸಾರ್ವಜನಿಕರು ಮತಗಳು ನಕಲಿ ಎಂದು ಪ್ರಶ್ನಿಸಿದಾದ ನೋವು ಆಗುತ್ತಿತ್ತು. ನಕಲಿ ಅಂದಾಗ ಅನುಭವಿಸಿದ ನೋವು ನನಗೆ ಗೊತ್ತು ಎಂದು ಬಿಜೆಪಿ ಮುಖಂಡ ಮುನಿರತ್ನ ಹೇಳಿದರು.

ಚುನಾವಣಾ ಆಯೋಗದಿಂದ ಹಿಡಿದು ಎಲ್ಲ ತನಿಖೆಗಳು ನಕಲಿ ಮತಗಳು ಚಲಾವಣೆಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಮುನಿರತ್ನಗೆ ಬಂದಿರುವ ಎಲ್ಲ ಮತಗಳು ಅಸಲಿ ಎಂಬುವುದು ಇಂದು ಸಾಬೀತಾಗಿದೆ. ನನ್ನ ವಿರುದ್ಧ ಅರ್ಜಿ ಸಲ್ಲಿಸಿದ್ದ ತುಳಸಿ ಮುನಿರಾಜು ಗೌಡ ಸಹ ಬಿಜೆಪಿಯಲ್ಲಿಯೇ ಇದ್ದಾರೆ. ಮುಂದೆ ಪಕ್ಷದಲ್ಲಿ ಜೊತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯದಾಗಲಿ ಎಂದರು.

ಚುನಾವಣೆಯಲ್ಲಿ ಒಬ್ಬರ ಮೇಲೆ ಒಬ್ಬರು ಮಾತನಾಡೋದು ಸಹಜ. ಚುನಾವಣಾ ಮತ್ತು ರಾಜಕೀಯದಲ್ಲಿ ವೈಯಕ್ತಿಯ ದ್ವೇಷ ಇರಲ್ಲ. ಬಿಜೆಪಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ.

ಆರ್.ಆರ್.ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕುಸುಮಾ ಹನುಂತರಾಯಪ್ಪ ಸ್ಪರ್ಧೆ ಮಾಡಿದ್ದಾರೆ. ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಆಗಮಿಸಿದ್ದಾರೆ. ಹಾಗಾಗಿ ಅವರ ಬಗ್ಗೆ ಹೆಚ್ಚೇನು ಮಾತನಾಡಲ್ಲ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಲ್ಲರಿಗೂ ಅವಕಾಶವಿದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *