ಇಬ್ಭಾಗವಾಗಿದ್ದ ವಿಮಾನ, ಕಣ್ಣ ಮುಂದೆ ಬಂದಿದ್ದು ಮಂಗಳೂರು ದುರಂತದ ನೆನಪು!

– ಏರ್ ಇಂಡಿಯಾ ಏರ್ಪೋರ್ಟ್ ಸಿಬ್ಬಂದಿಯ ಪ್ರತ್ಯಕ್ಷ ಕಥನ

ಕ್ಯಾಲಿಕಟ್: ಕಳೆದ ಶುಕ್ರವಾರ ಕ್ಯಾಲಿಕಟ್ ಏರ್ಪೋರ್ಟ್‍ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುರಂತದ ಕ್ಷಣಗಳು ಹೇಗಿತ್ತು..? ಅಂದು ಏನೇನಾಯ್ತು ಅನ್ನೋದನ್ನು ಅಂದು ಏರ್ಪೋರ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಸಿನಿ ಸನಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಘನಘೋರ ದೃಶ್ಯ ಕಂಡ ಎಂಥವರ ಕಣ್ಣಾಲಿಗಳೂ ತುಂಬಲೇ ಬೇಕು. ಕೊರೊನಾ ನಡುವೆಯೂ ಊರವರ ಸಾಹಸ ಹೇಗಿತ್ತು ಇತ್ಯಾದಿಗಳನ್ನು ಅವರು ವಿವರವಾಗಿ ಬರೆದಿದ್ದಾರೆ.

ಸಿನಿ ಸನಿಲ್ ಫೇಸ್ ಬುಕ್ ಪೋಸ್ಟ್ ನ ಪೂರ್ಣರೂಪ..
ಸಂಜೆ 7 ಗಂಟೆಗೆ ಹೊರಡಬೇಕಾದ ದೆಹಲಿ ವಿಮಾನದ ಬಿಎಂಎ (ಬ್ಯಾಗೇಜ್ ಮೇಕಪ್ ಏರಿಯಾ) ಕೆಲಸ ಮಾಡುವಾಗ ನಾನು ಹೊರಗಡೆಯೇ ನೋಡುತ್ತಿದ್ದೆ. ಕಾರಣ ಮಳೆ ಅಷ್ಟು ಬಿರುಸಾಗಿ ಸುರಿಯುತ್ತಿತ್ತು. ಜೊತೆಗೆ ವೇಗವಾಗಿ ಗಾಳಿಯೂ ಬೀಸುತ್ತಿತ್ತು. ಕೌಂಟರ್ ಕ್ಲೋಸ್ ಮಾಡಿ ಬ್ಯಾಗ್‍ಗಳನ್ನೆಲ್ಲಾ ಟ್ಯಾಲಿ ಮಾಡಿ ಪ್ರಿಂಟ್ ತೆಗೆಯುವ ವೇಳೆ ಫ್ಲೈ ದುಬೈ ಕೌಂಟರ್ ಓಪನ್ ಆಯಿತು. ಇದರ ಬಿಎಂಎ ಕೂಡ ನೋಡಲು ರಾಜೀವ್ ಸರ್ ನನ್ನಲ್ಲಿ ಹೇಳಿದರು. ಬ್ಯಾಟರಿ ಚಾರ್ಜ್ ಮುಗಿಯುತ್ತಿದ್ದ ಫೋನನ್ನು ಚಾರ್ಜ್ ಹಾಕಿ ನೋಡಿದಾಗ ಐಎಕ್ಸ್ 1344 ದುಬೈ ಫ್ಲೈಟ್ ನ ಕೆಲಸ ನಿರ್ವಹಿಸಲು ಪಿಪಿಇ ಕಿಟ್ ಧರಿಸಿ ಸುಮೇಶ್ ಹಾಗೂ ಬ್ಯಾಗೇಜ್ ಸೆಕ್ಷನ್ ಉಸ್ತುವಾರಿಯಲ್ಲಿದ್ದ ಪ್ರತಿಭಾ ರನ್ ವೇ ಕಡೆಗೇ ನೋಡುತ್ತಾ ಸಿದ್ಧವಾಗಿದ್ದರು. 20 ನಿಮಿಷಗಳ ಕಾಲ ವಿಮಾನ ಲ್ಯಾಂಡಿಂಗ್ ಸಾಧ್ಯವಾಗದೇ ಆಗಸದಲ್ಲೇ ಇತ್ತು. ನನ್ನ ಹಿಂದೆಯೇ ಪ್ರತಿಭಾ ಕೂಡ ಬಂದಳು. ನಾವು ರ್ಯಾಂಪ್ ನೋಡ್ತಾ ಮಾತಾಡ್ತಿದ್ದೆವು. ಆಗ ನಮಗೆ ಎಕ್ಸ್ ಪ್ರೆಸ್ ವಿಮಾನ ಬಂದಿಳಿಯೋದು ಕಾಣಿಸಿತು. ಆದರೆ ಆಗಲೇ ನಮಗೆ ಏನೋ ಸಮಸ್ಯೆಯಾಗಿದೆ ಎಂದೆನಿಸಲು ಶುರುವಾಗಿತ್ತು. ಕಾರಣ ಇಷ್ಟು ವರ್ಷದಲ್ಲಿ ನಾವು ಇಂತಹ ಒಂದು ಲ್ಯಾಂಡಿಂಗ್ ನೋಡಿರಲಿಲ್ಲ. ಇದನ್ನು ನಾವು ಮಾತಾಡ್ತಿದ್ದಂಗೆ ಪ್ರತಿಭಾ ಮುಂದಕ್ಕೆ ಹೋಗಿ ನೋಡಿದಳು. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

ಆದರೆ ನನ್ನ ಮನಸಿಗ್ಯಾಕೋ ಭಯ ಶುರುವಾಗಿತ್ತು. ಅಷ್ಟರಲ್ಲಿ ಸುಮೇಶ್ ಪಿಪಿಇ ಕಿಟ್ ಜೊತೆ ಓಡೋಡಿ ಬಂದ. ಅವನು ಆ ವಿಮಾನದ ಉಸ್ತುವಾರಿ ನೋಡಬೇಕಿತ್ತು. ಅರುಣ್ ಸರ್ ಕೂಡ ಬಂದರು. ಜೊತೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕೋಆರ್ಡಿನೇಟರ್, ಸಿಬ್ಬಂದಿ, ಲೋಡರ್ ಗಳು ಸೇರಿ ಸುಮಾರು 8-10 ಮಂದಿ ಬಂದರು. ಮತ್ತೆ ನಾವು ತಡ ಮಾಡಲಿಲ್ಲ, ತಕ್ಷಣ ಅಲ್ಲಿದ್ದ ಫೈರ್ ಫೋರ್ಸ್ ಆಫೀಸಿಗೆ ಹೋದ್ವಿ. ಏನೇ ಅವಘಡ ಆಗಿದ್ದರೂ ಮೊದಲು ಅವರಿಗೆ ಮಾಹಿತಿ ಸಿಗಬೇಕಿತ್ತು. ಈ ನಡುವೆಯೇ ರನ್ ವೇ ಮೂಲಕ ಫೈರ್ ಇಂಜಿನ್ ಹೋಗ್ತಿರೋದು ಕಾಣಿಸಿತು. ಅಗ್ನಿಶಾಮಕ ಸಿಬ್ಬಂದಿ ಎಟಿಸಿಯಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಹೇಳ್ತಿದ್ದರು. ಆಗಲೂ ಮಳೆ ಜೋರಾಗಿ ಸುರಿಯುತ್ತಿತ್ತು. ಇದೇ ವೇಳೆ ಸಿಐಎಸ್‍ಎಫ್ ಸಿಬ್ಬಂದಿಯಿದ್ದ ಒಂದು ವಾಹನವೂ ವೇಗವಾಗಿ ಹೋಯಿತು. ಅದೇ ಸಮಯಕ್ಕೆ ಬಂದ ಫೈರ್ ಸ್ಟಾಫ್ ಒಬ್ಬ ಹೇಳಿದ ಮಾತು ಕೇಳಿ ಹೃದಯ ನಿಂತಂತೆ ಭಾಸವಾಯಿತು, ನಂತರ ಪ್ರತಿಭಾಳನ್ನು ಆಲಿಂಗಿಸಿ ಕಣ್ಣೀರು ಹಾಕೋದಕ್ಕೆ ಮಾತ್ರ ಸಾಧ್ಯವಾಯಿತು. ಕಾರಣ ಆತ ಹೇಳಿದ್ದು – ‘ವಿಮಾನ ಕೆಳಗೆ ಹೋಯಿತು’. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

ಈ ಮಾತು ಕೇಳುವವರೆಗೆ ವಿಮಾನ ರನ್ ವೇಯಿಂದ ಜಾರಿರುತ್ತೆ, ಸ್ಕಿಡ್ ಆಗಿರುತ್ತೆ ಎಂದಷ್ಟೇ ಅಂದುಕೊಂಡು ನಮ್ಮ ಮನಸ್ಸಿಗೆ ನಾವೇ ಸಮಾಧಾನ ಹೇಳಿದ್ವಿ. ಆದರೆ ಅವನು ಹೇಳಿದ ಈ ಮಾತು ನಮ್ಮೆಲ್ಲಾ ನಿರೀಕ್ಷೆಗಳನ್ನು ಕೊನೆಯಾಗಿಸಿತು. ಮನಸ್ಸಿಗೆ ಆಘಾತವಾಗಿತ್ತು. ಕಣ್ಣ ಮುಂದೆ ಮಂಗಳೂರು ವಿಮಾನ ದುರಂತದ ದೃಶ್ಯಗಳೆಲ್ಲಾ ಹಾದುಹೋದವು. ವಿಮಾನ ಕೆಳಗೆ ಹೋಗಿದ್ದರೆ ನೋಡೋದಕ್ಕೆ ಇನ್ನೇನೂ ಉಳಿದಿರಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಕಾರಣ ಮಂಗಳೂರಿನಂತೆಯೇ ಇಲ್ಲಿರೋದು ಕೂಡ ಟೇಬಲ್ ಟಾಪ್ ಏರ್ಪೋರ್ಟ್. ಕೆಳಗೆ ಹೋಗಿದ್ದರೆ ವಿಮಾನ ಅಗ್ನಿಗಾಹತಿಯಾಗೋದು ಖಚಿತ. ಮಂಗಳೂರು ಘಟನೆ ಇದನ್ನೇ ಅಲ್ಲವೇ ನಮಗೆ ತೋರಿಸಿಕೊಟ್ಟಿದ್ದು.! ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

ಬೆಚ್ಚಿ ನಿಂತಿದ್ದ ನಮ್ಮ ಮುಂದೆ ವಿಮಾನ ನಿಲ್ದಾಣ ಪ್ರಾಧಿಕಾರದ ಎರಡು ವಾಹನಗಳು ಬಂದು ನಿಂತಿದ್ದವು. ಓಡಿ ಅದನ್ನು ಹತ್ತುವಾಗ ನಮ್ಮ ಮುಂದೆ ಕೊರೊನಾ, ಸಾಮಾಜಿಕ ಅಂತರ ಯಾವುದೂ ಇರಲಿಲ್ಲ. ನಮ್ಮೆಲ್ಲರನ್ನೂ ಹೊತ್ತೊಯ್ದ ವಿಮಾನ ಸುಮಾರು 2 ಕಿ.ಮೀ. ಸಂಚರಿಸಿ ಘಟನಾ ಸ್ಥಳದ ಬಳಿ ನಿಲ್ಲಿಸಿದಾಗ ಕಂಡ ದೃಶ್ಯ ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಇಬ್ಭಾಗವಾಗಿ ಮಲಗಿತ್ತು ವಿಮಾನ. ವಿಮಾನದ ಮುಂಭಾಗ (ನೋಸ್) ಹಾಗೂ ಹಿಂಭಾಗ (ಟೇಲ್) ಬಿಟ್ಟು ಮಧ್ಯಭಾಗ ಇಲ್ಲ ಎಂದೇ ಹೇಳಬಹುದು. ಕೆಲವೇ ಕೆಲವು ಸಿಐಎಸ್‍ಎಫ್, ಫೈರ್ ಹಾಗೂ ಏರ್ಪೋರ್ಟ್ ಅಥಾರಿಟಿ ಸಿಬ್ಬಂದಿ ಬಿಟ್ಟರೆ ಅಲ್ಲಿ ಉಳಿದವರೆಲ್ಲಾ ಊರ ಜನ. ವಿಮಾನದಿಂದ ರಕ್ಷಣೆ ಮಾಡಿದವರನ್ನು ಸಿಕ್ಕ ಸಿಕ್ಕ ವಾಹನಗಳಿಗೆ ಹಾಕಿ ಕಳಿಸುತ್ತಿದ್ದರು. ಅದರಲ್ಲಿ ಆಟೋ ರಿಕ್ಷಾಗಳು ಕೂಡ ಇದ್ದವು. ಸುತ್ತಮುತ್ತ ವಿಮಾನದ ಇಂಧನದ ವಾಸನೆ ಹರಡಿತ್ತು. ಅಂಬುಲೆನ್ಸ್‍ಗಳು ಬರುತ್ತಿದ್ದವು. ಸ್ಟ್ರೆಚರ್ ಗಳು ಕಡಿಮೆ ಇದ್ದ ಕಾರಣ ವಿಮಾನದಿಂದ ರಕ್ಷಣೆ ಮಾಡಿದವರನ್ನು ಅಲ್ಲೇ ನೆಲದಲ್ಲಿ ಮಲಗಿಸಿದ್ದರು. ನಮ್ಮನ್ನು ನೋಡಿದ ರಕ್ಷಣಾ ತಂಡದಲ್ಲಿದ್ದ ಸ್ಥಳೀಯರೊಬ್ಬರು ನೆಲದಲ್ಲಿ ಮಲಗಿಸಿದ್ದ ಮಹಿಳೆಯನ್ನು ನೋಡಿಕೊಳ್ಳಿ ಎಂದು ಹೇಳಿದರು. ಅವರ ಬಳಿ ಹೋಗಿ ಧೈರ್ಯ ಹೇಳುವಾಗಲೂ ಆಕೆ ‘ನನ್ನ ಮಗಳು, ನನ್ನ ಗಂಡ’ ಎಂದು ಹೇಳುತ್ತಲೇ ಇದ್ದರು. ನನ್ನ ಮಗಳು ಆ ವಿಮಾನದಲ್ಲಿ ಸಿಲುಕಿದ್ದಾಳೆ ಎಂದು ಹೇಳಿದ್ದು ಅಲ್ಲೇ ಪಕ್ಕದಲ್ಲಿ ಮಲಗಿದ್ದ ಮತ್ತೊಬ್ಬಳು ಅಕ್ಕ. ಇವೆಲ್ಲಾ ನಾವು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲದ ಕ್ಷಣಗಳು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

ಪೈಲಟನ್ನು ವಿಮಾನದಿಂದ ಹೊರತೆಗೆಯಬೇಕಾದರೆ ಕಾಕ್‍ಪಿಟ್ ಒಡೆಯಲೇ ಬೇಕಿತ್ತು. ನಮ್ಮ ಯೂನಿಫಾರ್ಮ್ ನೋಡಿದ ರಕ್ಷಣಾ ತಂಡದ ಸದಸ್ಯರು ಕಟ್ಟರ್ ಬೇಕು ಎಂದು ಕೇಳಿದರು. ತಕ್ಷಣ ಫೈರ್ ಸಿಬ್ಬಂದಿ ಬಳಿ ಓಡಿ ಹೋಗಿ ಇದನ್ನು ಹೇಳಿದೆ. ಈ ನಡುವೆ ವಿಮಾನ ಇಂಧನ ಲೀಕೇಜ್ ಇರೋದ್ರಿಂದ ಎಲ್ಲರೂ ಮೊಬೈಲ್ ಸ್ವಿಚ್ ಆಫ್ ಮಾಡಿ ಎಂದು ಅನೌನ್ಸ್ ಮಾಡಿದ್ರು. ಜೊತೆಗೆ ಭಾರೀ ಮಳೆ. ನಮ್ಮ ಜೊತೆ ಬಂದಿದ್ದ ಅರುಣ್ ಸರ್ ವಿಮಾನದ ಮೇಲೆ ಹತ್ತಿ, ಒಳಗೆ ಹೋಗಿ ಹಲವರನ್ನು ರಕ್ಷಣೆ ಮಾಡುತ್ತಿದ್ದರು. ಅಷ್ಟರಲ್ಲಾಗಲೇ ಕೇರಳ ಫೈರ್ ಫೋರ್ಸ್, ಪೊಲೀಸ್ರು, ಜಿಲ್ಲಾಧಿಕಾರಿ ಎಲ್ಲರೂ ಬಂದರು.

ಏರ್ಪೋರ್ಟ್ ಸಿಬ್ಬಂದಿ ಎಲ್ಲರೂ ಇಲ್ಲಿಗೆ ತಲುಪುವ ಮುನ್ನವೇ ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ರಕ್ಷಣಾ ಕಾರ್ಯಕ್ಕೆ ಓಡೋಡಿ ಬಂದ ಕೊಂಡೋಟ್ಟಿ ಎಂಬ ಗ್ರಾಮದ ನಿವಾಸಿಗಳನ್ನು ಎಷ್ಟು ಅಭಿನಂದಿಸಿದರೂ ಸಾಲದು. ಇದು ವಿದೇಶದಿಂದ ಬಂದ ವಿಮಾನ. ಕೋವಿಡ್ ಪಾಸಿಟಿವ್ ಇದ್ದವರಿದ್ದರೆ ನಮಗೆ ಪಾಸಿಟಿವ್ ಬರಬಹುದು ಎಂದು ಗೊತ್ತಿದ್ದರೂ ಅಧೀರರಾಗದೇ ಮುಂದೆ ಬಂದ ಸ್ಥಳೀಯರು, ವಿಮಾನದ ಇಂಧನ ಲೀಕ್ ಆಗುತ್ತಿದೆ, ಒಂದು ಸಣ್ಣ ಸ್ಪಾರ್ಕ್ ಕೂಡ ದೊಡ್ಡ ಸ್ಫೋಟವನ್ನೇ ಮಾಡಬಹುದು ಎಂಬ ಅರಿವಿದ್ದರೂ, ರಕ್ಷಣಾ ಕಾರ್ಯದಿಂದ ಹಿಂದೆ ಸರಿಯದೇ ವಿಮಾನದಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಿದ ಸಿಐಎಸ್‍ಎಫ್ ಹಾಗೂ ಸ್ಥಳೀಯ ನಿವಾಸಿಗಳು. ದೊಡ್ಡದೊಂದು ದುರಂತಕ್ಕೆ ಸಾಕ್ಷಿಯಾದ ಕಣ್ಣು ಹಾಗೂ ಮನಸ್ಸು ಸ್ತಬ್ಧವಾದ ಕ್ಷಣಗಳು. 2010 ಮೇ 22ರ ನಂತರ 10 ವರ್ಷದ ಬಳಿಕ ಆಗಸ್ಟ್ 7 ಕೂಡ ‘ಬ್ಲ್ಯಾಕ್ ಡೇ’ಗಳ ಪಟ್ಟಿಗೆ ಸೇರಿತು. ಮತ್ತೆ ನಾವು ನೆನಪಿಸಿಕೊಳ್ಳಲೂ ಬಯಸದ ಈ ದಿನ.  ಇದನ್ನೂ ಓದಿ: ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

ಮರಣ ಸಂಖ್ಯೆ ಇಷ್ಟು ಕಡಿಮೆಯಾಗಿದ್ದಕ್ಕೆ ಕಾರಣ ಕ್ಯಾಪ್ಟನ್ ಪರಿಣತಿ. ವಿಮಾನವು ಅಗ್ನಿಗಾಹುತಿಯಾಗದೇ ಸ್ವಯಂ ಜವರಾಯನಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ ಸರ್, ಅಖಿಲೇಶ್ ಸರ್… ನಮ್ಮೆಲ್ಲರ ಮನಸ್ಸಿನಿಂದ ಮಾಸದೇ ನೀವು ನೆನಪಲ್ಲೇ ಉಳಿಯುತ್ತೀರಿ… ಪ್ರಣಾಮಗಳು.
– ಸಿನಿ ಸನಿಲ್

Comments

Leave a Reply

Your email address will not be published. Required fields are marked *