ಇಬ್ಬರು ಡಕ್ ಔಟ್, ಗಿಲ್ ಅರ್ಧಶತಕ – ಕೋಲ್ಕತ್ತಾಗೆ ಮೊದಲ ಸುಲಭ ಜಯ

– ಶುಭಮನ್, ಮೋರ್ಗಾನ್ ಆಟಕ್ಕೆ ತಲೆಬಾಗಿದ ರೈಸರ್ಸ್

ಶಾರ್ಜಾ: ಯುವ ಆಟಗಾರ ಶುಭಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಫಲದಿಂದ ಕೋಲ್ಕತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಕೋಲ್ಕತ್ತಾ ತಂಡ ಐಪಿಎಲ್-2020ಯಲ್ಲಿ ಮೊದಲ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು. ಕೊನೆಗೆ ಕನ್ನಡಿಗ ಮನೀಶ್ ಪಾಂಡೆಯವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 143 ರನ್ ಸೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಶುಭಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರ ಅದ್ಭುತ ಜೊತೆಯಾಟದಿಂದ ಇನ್ನೂ ಎರಡು ಓವರ್ ಬಾಕಿ ಇರುವಾಗಲೇ 145 ರನ್ ಚಚ್ಚಿದ ಕೋಲ್ಕತ್ತಾ 7 ವಿಕೆಟ್ ಗಳಿಂದ ಜಯ ಸಾಧಿಸಿತು.

ಇದೇ ವೇಳೆ ಶುಭಮನ್ ಮತ್ತು ಮೋರ್ಗಾನ್, 70 ಬಾಲಿಗೆ 92 ರನ್‍ಗಳ ಉತ್ತಮ ಜೊತೆಯಾಟವಾಡಿದರು. ಇದರಲ್ಲಿ ಮೋರ್ಗಾನ್ ಅವರು 29 ಬಾಲಿಗೆ ಮೂರು ಫೋರ್ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿ ಮಿಂಚಿದರು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಗಿಲ್, 62 ಎಸೆತದಲ್ಲಿ 70 ರನ್ ಸಿಡಿಸಿದರು. ಗಿಲ್ ಈ ಇನ್ನಿಂಗ್ಸ್ ನಲ್ಲಿ 5 ಫೋರ್ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ ಕೋಲ್ಕತ್ತಾ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೋಲ್ಕತ್ತಾಗೆ ಆರಂಭಿಕ ಆಘಾತ ನೀಡಿದ ಹೈದರಾಬಾದ್ ವೇಗಿ ಖಲೀಲ್ ಅಹ್ಮದ್, ಸೊನ್ನೆ ಸುತ್ತಿ ಸುನಿಲ್ ನರೈನ್ ಪೆವಲಿಯನ್ ಸೇರಿದರು. ನಂತರ ಜೊತೆಯಾದ ಗಿಲ್ ಮತ್ತು ನಿತೀಶ್ ರಾಣಾ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಆದರೆ 4 ಓವರಿನ ನಾಲ್ಕನೇ ಬಾಲಿನಲ್ಲಿ ನಟರಾಜ್ ಅವರಿಗೆ ಔಟ್ ಆಗಿ 13 ಬಾಲಿಗೆ 26 ರನ್ ಗಳಿಸಿದ್ದ ನಿತೀಶ್ ರಾಣಾ ಔಟ್ ಆದರು. ಈ ಮೂಲಕ ಕೋಲ್ಕತ್ತಾ ಆರು ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 52 ರನ್ ಸೇರಿಸಿತ್ತು.

ನಂತರ ಬಂದ ನಾಯಕ ದಿನೇಶ್ ಕಾರ್ತಿಕ್‍ಗೆ ರಶೀದ್ ಖಾನ್ ಅವರು ಮೂರನೇ ಬಾಲಿನಲ್ಲೇ ಶಾಕ್ ನೀಡಿದರು. ಮೂರು ಬಾಲುಗಳನ್ನು ಎದುರಿಸಿದ ಕಾರ್ತಿಕ್ ಡಾಕ್ ಔಟ್ ಆಗಿ ಹೊರನಡೆದರು. ಈ ಮೂಲಕ ಕೋಲ್ಕತ್ತಾದ ಇಬ್ಬರು ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳು ಡಾಕ್ ಔಟ್ ಆದರು. ಮೊದಲಿನಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಶುಭಮನ್ ಗಿಲ್ 42 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.

Comments

Leave a Reply

Your email address will not be published. Required fields are marked *