ಇಬ್ಬರನ್ನ ಜಗಳಕ್ಕೆ ಬಿಟ್ಟು ಸೇಫ್ ಆದಂತಿದೆ: ಸುಮಲತಾ, ಹೆಚ್‍ಡಿಕೆ ಸಮರಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದೆ ಸುಮಾಲತಾ ನಡುವಿನ ಗಲಾಟೆ ಬಗ್ಗೆ ಮಾಜಿ ಸಚಿವ ಚಲುವರಾಯಸ್ವಾಮಿ ಬೇಸರ ಹೊರಹಾಕಿದ್ದು, ಸರ್ಕಾರದಿಂದ ಮಾಡಬೇಕಾದ ಕೆಲಸವನ್ನು ರಸ್ತೆಯಲ್ಲಿ ಬೀದಿಜಗಳ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಂಡ್ಯ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಚರ್ಚಿಸಿದ ನಂತರ ಮಾತನಾಡಿದ ಅವರು, ಸುಮಲತಾ ಮತ್ತು ಕುಮಾರಸ್ವಾಮಿ ಟಾಕ್‍ಫೈಟ್ ಬಗ್ಗೆ ಮಾತನಾಡಬಾರದು ಎಂದು ತೀರ್ಮಾನಿದ್ದೇನೆ. ಒಂದು ಕಡೆ ಮಾಜಿ ಮುಖ್ಯಮಂತ್ರಿ ಟೀಂ. ಮತ್ತೊಂದು ಕಡೆ ಸಂಸದರು. ಯಾವ ಉದ್ದೇಶದಿಂದ ಇವರು ಫೈಟ್ ಮಾಡುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ. ಸರ್ಕಾರದಿಂದ ಮಾಡಬೇಕಾದ ಕೆಲಸವನ್ನು ರೋಡಲ್ಲಿ ಬೀದಿಜಗಳ ಮಾಡಿಕೊಂಡಿದ್ದಾರೆ. ರೈತರು ಕೋವಿಡ್‍ನಿಂದ ತತ್ತರಿಸಿ ಹೋಗಿದ್ದಾರೆ. ಆರ್ಥಿಕ ಅವ್ಯವಸ್ಥೆ ಆಗಿದೆ. ಶುಗರ್ ಫ್ಯಾಕ್ಟರಿ ನಿಂತಿದೆ. ಮನ್ಮುಲ್ ಹಗರಣ ಆಗಿದೆ. ನೀರನ್ನು ಸರಿಯಾಗಿ ಕೊಡದೆ ರೈತರ ಬೆಳೆ ಹಾನಿಯಾಗಿದೆ. ಈ ರೀತಿಯ ನೂರಾರು ಸಮಸ್ಯೆ ಇದೆ. ಈ ಸಮಯದಲ್ಲಿ ವೈಯಕ್ತಿಕ ಪ್ರತಿಷ್ಟೆ ಮಾಡಿಕೊಂಡು ಹೋಗುವುದು ನಮ್ಮ ಜಿಲ್ಲೆಯ ಹಿತದಿಂದ ಒಳ್ಳೆಯದಲ್ಲ ಎಂದರು.

ಎಲ್ಲ ಸಮಸ್ಯೆಗೂ ಪರಿಹಾರ ಇವರ ಕಿತ್ತಾಟ ಎಂಬ ರೀತಿ ಸರ್ಕಾರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇವರಿಬ್ಬರನ್ನು ಬೀದಿಗೆ ಬಿಟ್ಟು ನಾವು ಸೇಫಾಗಿರಬಹುದು. ರೈತರ ಸಮಸ್ಯೆ ಪರಿಹರಿಸಲು ಸ್ವಲ್ಪ ಸಮಯ ಸಿಗಲಿದೆ ಎಂದು ಸರ್ಕಾರ ಸುಮ್ಮನಿರುವಂತಿದೆ. ಇಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಕೆಆರ್‍ಎಸ್ ಅಣೆಕಟ್ಟೆಗೆ ಸಮಸ್ಯೆ ಇರುವ ಬಗ್ಗೆ, 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವ ಬಗ್ಗೆ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಈ ಜಗಳದಿಂದ ಅವರು ಜಿಲ್ಲೆಯ ರೈತರ ಪರ ಇಲ್ಲ ಎಂಬುದು ಎದ್ದು ಕಾಣುತ್ತಿದೆ ಎಂದು ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.

Comments

Leave a Reply

Your email address will not be published. Required fields are marked *