ಇನ್ನೂ 400 ಸಿಡಿಗಳಿವೆ, ಸಲುಗೆ ಬೆಳೆಸಿ, ಸಿಡಿ ಮಾಡಿ ಬ್ಲ್ಯಾಕ್‍ಮೇಲ್ ಮಾಡ್ತಾರೆ: ಯತ್ನಾಳ್ ಹೊಸ ಬಾಂಬ್

– ರಾಜ್ಯದಲ್ಲಿ ದೊಡ್ಡ ಸಿಡಿ ಗ್ಯಾಂಗ್ ಇದೆ

ವಿಜಯಪುರ: ಇನ್ನೂ 400 ಸಿಡಿಗಳಿವೆ ಎಂದು ವಿಧಾನಸೌಧದಲ್ಲಿ ಮೊಗಸಾಲೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾಂಗ್ ಕಟ್ಟಿಕೊಂಡು ಶಾಸಕರ ಟಾರ್ಗೆಟ್ ಮಾಡುತ್ತಿದ್ದಾರೆ. ಮೊದಲು ಕೆಲಸ ಇದೆ ಎಂದು ಶಾಸಕರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಸಲುಗೆ ಬೆಳೆಸಿಕೊಂಡು ಸಿಡಿ ಮಾಡಿ, ಬ್ಲ್ಯಾಕ್‍ಮೇಲ್ ಮಾಡುತ್ತಾರೆ. ಕರ್ನಾಟಕದಲ್ಲಿ ದೊಡ್ಡ ಸಿಡಿ ಗ್ಯಾಂಗ್ ಇದೆ. ರಾಜಕಾರಣಿಗಳು, ಅಧಿಕಾರಿಗಳು, ಸಿನಿಮಾ ಸ್ಟಾರ್‍ಗಳನ್ನು ಬ್ಲ್ಯಾಕ್‍ಮೇಲ್ ಮಾಡುವ ಗ್ಯಾಂಗ್ ಇದೆ. ಹುಬ್ಬಳ್ಳಿಯಲ್ಲಿ ಕೆಲವರಿಗೆ ಹೀಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಡಿ ಮಾಡಿ, ಬ್ಲ್ಯಾಕ್‍ಮೇಲ್ ಮಾಡುವ ಹೊಸತರದ ಬಿಜಿನೆಸ್ ಈಗ ಶುರುವಾಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರ ಕೇಸ್ ನ್ನು ಸಿಬಿಐಗೆ ಕೊಡಬೇಕು. ಸಿಬಿಐನಿಂದ ಮಾತ್ರ ಪ್ರಕರಣ ತಾರ್ಕಿಕ ಅಂತ್ಯ ಕಾಣಲು ಸಾಧ್ಯ. ಎಸ್‍ಐಟಿ ಮೇಲೆ ವಿಶ್ವಾಸ ಇಲ್ಲ. ಎಸ್‍ಐಟಿ ಸಿಎಂ, ಗೃಹ ಸಚಿವರ ಅಧೀನದಲ್ಲಿದೆ. ಯಾರನ್ನು ಬೇಕಾದರೂ ಸಿಲುಕಿಸುತ್ತಾರೆ, ಬಿಡಿಸುತ್ತಾರೆ. ಡ್ರಗ್ಸ್ ಕೇಸ್ ಸಹ ಹೀಗೆ ಆಗಿದೆ. ಡ್ರಗ್ಸ್ ಕೇಸಲ್ಲಿ ಶಾಸಕರ ಮಕ್ಕಳು ಇದ್ದರು. ಅವರ ಹೆಸರೇ ಹೊರಗೆ ಬಂದಿಲ್ಲ ಎಂದು ಹರಿಹಾಯ್ದರು.

ಕೇಂದ್ರ ಗೃಹ ಸಚಿವ ಅಮೀತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಮಾಡಿಸುವ ಗ್ಯಾಂಗ್ ಸಹ ಇವೆ. ಅಮೀತ್ ಶಾ, ನಡ್ಡಾ ಭೇಟಿ ಮಾಡಿಸಲು 25 ಲಕ್ಷ, 1 ಕೋಟಿ ರೂ. ಕೇಳುತ್ತಾರೆ. ಒಬ್ಬ ರಾಜ್ಯಸಭಾ ಸದಸ್ಯ ಯುವರಾಜನಿಗೆ 10 ಕೋಟಿ ರೂ. ಕೊಟ್ಟಿದ್ದಾರೆ ಎಂಬ ಸುದ್ದಿ ಇದೆ. ದೊಡ್ಡ ಜಾಲ ಕರ್ನಾಟಕದಲ್ಲಿದೆ. ಸಿಬಿಐ ಮೂಲಕ ತನಿಖೆಯಾಗಬೇಕು. ಮುಗ್ದರ ವೀಡಿಯೋ ಮಾಡಿ ಬ್ಲ್ಯಾಕ್‍ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಾರೆ. ಎಸ್‍ಐಟಿ ಮೇಲೆ ನನಗೆ ವಿಶ್ವಾಸವಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *