ಇನ್ನು ಮೂರು ದಿನ ಭಾರೀ ಮಳೆ – ಎಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ?

ಬೆಂಗಳೂರು: ಕೊರೊನಾರ್ಭಟದ ನಡುವೆ ಕರುನಾಡಿಗೆ ಮಹಾ ಮಳೆ, ಮಹಾ ಪ್ರವಾಹ ಆತಂಕ ತಂದೊಡ್ಡಿದೆ. ಆಗಸ್ಟ್ ತಿಂಗಳಲ್ಲಿ ಒಂದು ಸುತ್ತು ಕರಾವಳಿ, ಮಲೆನಾಡು ಭಾಗವನ್ನು ಕಂಗೆಡಿಸುವಂತೆ ಮಾಡಿದ್ದ ಮಳೆರಾಯ ಕಳೆದೊಂದು ವಾರದಿಂದ ಉತ್ತರ ಕರ್ನಾಟಕವನ್ನು ಬಿಟ್ಟುಬಿಡದೇ ಕಾಡ್ತಿದ್ದಾನೆ. ಇದೀಗ ವರುಣಾರ್ಭಟ ಕರಾವಳಿ, ಮಲೆನಾಡು ಸೀಮೆಗೂ ವಿಸ್ತರಿಸಿದೆ.

ಈಶಾನ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮ, ಅರಬ್ಬಿ ಸಮುದ್ರದ ತಟದಲ್ಲಿರುವ ಕರ್ನಾಟಕ ಕರಾವಳಿ ಜಿಲ್ಲೆಗಳ ಮೇಲಾಗಿದೆ. ಕೇವಲ ಒಂದೇ ಒಂದು ರಾತ್ರಿಯಲ್ಲಿ ಉಂಟಾದ ಕಂಡು ಕೇಳರಿಯದ ಧಾರಾಕಾರ ಮಹಾ ಮಳೆಗೆ ಕೃಷ್ಣನೂರು ಉಡುಪಿಯ ಚಿತ್ರಣ ಸಂಪೂರ್ಣ ಬದಲಾಗಿದೆ.

ಮಹಾ ಮಳೆಯ ಪರಿಣಾಮ ಎಲ್ಲೆಲ್ಲೂ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. 800ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ. ಕಳೆದ 40 ವರ್ಷಗಳಲ್ಲೇ ಉಡುಪಿ ಜಿಲ್ಲೆ ಇಂತಹ ಸನ್ನಿವೇಶವನ್ನು ಎದುರಿಸಿರಲ್ಲ. ಎಲ್ಲಿ ನೋಡಿದರಲ್ಲಿ ನೀರು ಕಾಣುತ್ತಿದೆ. ಸಾವಿರಾರು ಮಂದಿಯನ್ನು ಬೋಟ್ ನೆರವಿನಿಂದ ಎನ್‍ಡಿಆರ್‍ಎಫ್ ರಕ್ಷಣೆ ಮಾಡಿದೆ. ಅಗತ್ಯಬಿದ್ರೆ ಹೆಲಿಕಾಪ್ಟರ್ ಗಳನ್ನು  ಬಳಸಿಕೊಳ್ಳಲು ಎನ್‍ಡಿಆರ್‍ಎಫ್ ಪ್ಲಾನ್ ಮಾಡಿಕೊಂಡಿದೆ.

ಕೇವಲ ಉಡುಪಿ ಮಾತ್ರವಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿ ಜಿಲ್ಲೆಗಳು ಕೂಡ ಮಹಾ ಮಳೆಗೆ ತತ್ತರಿಸಿಹೋಗಿವೆ. ಎಲ್ಲಾ ಕಡೆ ನದಿಗಳು ಉಕ್ಕೇರುತ್ತಿವೆ.

ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಇನ್ನು ಮೂರು ದಿನ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ?
* ಬ್ರಹ್ಮಾವರ – 39 ಸೆಂಟಿಮೀಟರ್
* ಕಾರ್ಕಳ – 28 ಸೆಂಟಿಮೀಟರ್
* ಮುಲ್ಕಿ, ಉಡುಪಿ – 27 ಸೆಂಟಿಮೀಟರ್
* ಆಗುಂಬೆ, ಮಂಗಳೂರು – 22 ಸೆಂಟಿಮೀಟರ್
* ಮೂಡಬಿದ್ರೆ – 19 ಸೆಂಟಿಮೀಟರ್
* ಕೋಟಾ, ಪಣಂಬೂರು – 18 ಸೆಂಟಿಮೀಟರ್
* ಸುಬ್ರಹ್ಮಣ್ಯ, ಭಾಗಮಂಡಲ – 17 ಸೆಂಟಿಮೀಟರ್
* ಉಪ್ಪಿನಂಗಡಿ, ಪುತ್ತೂರು – 15 ಸೆಂಟಿಮೀಟರ್

Comments

Leave a Reply

Your email address will not be published. Required fields are marked *