ಇನ್ನು ಮುಂದೆ ಗೂಗಲ್‌ ಫೋಟೋ ಉಚಿತವಲ್ಲ

ಕ್ಯಾಲಿಫೋರ್ನಿಯಾ: ಇನ್ನು ಮುಂದೆ ಗೂಗಲ್‌ನಲ್ಲಿ ಉಚಿತವಾಗಿ ಅನ್‌ಲಿಮಿಟೆಡ್‌ ಫೋಟೋಗಳನ್ನು ಅಪ್ಲೋಡ್‌ ಮಾಡಲು ಸಾಧ್ಯವಿಲ್ಲ.

2021ರ ಜೂನ್‌ 1 ರಿಂದ ಈಗಾಗಲೇ ನೀಡಿರುವ ಅನ್‌ಲಿಮಿಟೆಡ್‌ ಸ್ಟೋರೇಜ್‌ ಸೌಲಭ್ಯವನ್ನು ನಿಲ್ಲಿಸುವುದಾಗಿ ಗೂಗಲ್‌ ಬುಧವಾರ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಪ್ರಸ್ತುತ 16 ಮೆಗಾ ಪಿಕ್ಸೆಲ್‌ ಫೋಟೋ ಮತ್ತು 1080 ಎಚ್‌ಡಿ ಗುಣಮಟ್ಟದವರೆಗಿನ ವಿಡಿಯೋಗಳನ್ನು ಗೂಗಲ್‌ ಫೋಟೋದಲ್ಲಿ ಉಚಿತವಾಗಿ ಅಪ್ಲೋಡ್‌ ಮಾಡಬಹುದಾಗಿದೆ. ಇದಕ್ಕಿಂತ ಗುಣಮಟ್ಟದ ಫೋಟೋ, ವಿಡಿಯೋಗಳನ್ನು ಅಪ್ಲೋಡ್‌ ಮಾಡಬಹುದಾದರೂ ಅದಕ್ಕೆ ಗರಿಷ್ಟ 15 ಜಿಬಿ ಮಿತಿಯನ್ನು ಹಾಕಲಾಗಿತ್ತು.

ಜೂನ್‌ 1 ರಿಂದ ಒಂದು ಗೂಗಲ್‌ ಖಾತೆಯಿಂದ 15 ಜಿಬಿಗಿಂತ ಜಾಸ್ತಿ ಸ್ಟೋರೇಜ್‌ ಬಳಕೆಯಾದರೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಂದರೆ ಇದರ ಅರ್ಥ ಗೂಗಲ್‌ ಡ್ರೈವ್‌, ಗೂಗಲ್‌ ಫೋಟೋ, ಜಿಮೇಲ್‌ ಸ್ಟೋರೇಜ್‌ ಮಿತಿ ಗರಿಷ್ಟ 15 ಜಿಬಿ ದಾಟಿದ್ದರೆ ಅದಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈಗಾಗಲೇ ಉಚಿತವಾಗಿ ನೀಡಿರುವ 15 ಜಿಬಿ ಪೂರ್ಣಗೊಂಡಿದ್ದರೂ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಮೇ 31ರವರೆಗೆ ನೀವು ಎಷ್ಟು ಫೋಟೋ, ವಿಡಿಯೋ ಬೇಕಾದರೂ ನಿಮ್ಮ ಖಾತೆಯಿಂದ ಅಪ್ಲೋಡ್‌ ಮಾಡಬಹುದು. ಅಲ್ಲಿಯವರೆಗೆ ಅಪ್ಲೋಡ್‌ ಮಾಡಿದ್ದಕ್ಕೆ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದರೆ ಜೂನ್‌ 1ರಿಂದ ಗರಿಷ್ಟ ಮಿತಿಯಾಗಿರುವ 15 ಜಿಬಿಗಿಂತ ಜಾಸ್ತಿ ಬಳಕೆಯಾದಲ್ಲಿ ಅದಕ್ಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಗೂಗಲ್‌ 2015ರಲ್ಲಿ ಗೂಗಲ್‌ಫೋಟೋದಲ್ಲಿ ಅನಿಯಮಿತ ಫೋಟೋ, ವಿಡಿಯೋ ಅಪ್ಲೋಡ್‌ ಮಾಡಬಹುದು ಎಂದು ಹೇಳಿತ್ತು. ಈಗ ನಿಧನವಾಗಿ ಈ ಸೇವೆಗಳಿಗೆ ಶುಲ್ಕ ವಿಧಿಸಲು ಮುಂದಾಗುತ್ತಿದೆ.

ಗೂಗಲ್‌ ಕಂಪನಿಯ ಪಿಕ್ಸೆಲ್‌ ಫೋನ್‌ ಬಳಕೆದಾರರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಈ ಫೋನ್‌ ಗ್ರಾಹಕರು  ಗೂಗಲ್‌ ಫೋಟೋದಲ್ಲಿ ಎಷ್ಟು ಬೇಕಾದರೂ ಫೋಟೋಗಳನ್ನು ಅಪ್ಲೋಡ್‌ ಮಾಡಬಹುದು ಎಂದು ಹೇಳಿದೆ.

ಶುಲ್ಕ ಎಷ್ಟು?
ಗೂಗಲ್‌ ಡ್ರೈವ್‌ನಲ್ಲಿ 1 ತಿಂಗಳಿಗೆ 100 ಜಿಬಿಗೆ 1.99 ಡಾಲರ್‌(148 ರೂ.) ಇದ್ದರೆ 1 ಟೆರಾ ಬೈಟ್‌ಗೆ 9.999 ಡಾಲರ್‌(743 ರೂ. ಇದೆ) . ಗೂಗಲ್‌ ತನ್ನ ಬಳಕೆದಾರರಿಗೆ 15 ಜಿಬಿ ಅನ್‌ಲಿಮಿಟೆಡ್‌ ಸ್ಟೋರೇಜ್‌ ನೀಡಿದರೆ ಆಪಲ್‌ ಕಂಪನಿ ಗ್ರಾಹಕರಿಗೆ 5 ಜಿಬಿ ಮಾತ್ರ ಉಚಿತ ಸ್ಟೋರೇಜ್‌ ನೀಡುತ್ತದೆ. ಬಳಿಕ 50 ಜಿಬಿಗೆ ಪ್ರತಿ ತಿಂಗಳಿಗೆ 0.99 ಡಾಲರ್‌(73 ರೂ) ಹಣವನ್ನು ಪಾವತಿಸಬೇಕಾಗುತ್ತದೆ. ಅಮೆಜಾನ್‌ ತನ್ನ ಪ್ರೈಂ ಸದಸ್ಯರಿಗೆ ವಿಶೇಷ ಸೇವೆ ನೀಡುತ್ತಿದ್ದು, ಇದರಲ್ಲಿ ಬಳಕೆದಾರರು ಅನ್‌ಲಿಮಿಟೆಡ್‌ ಫೋಟೋ, ವಿಡಿಯೋವನ್ನು ಉಚಿತವಾಗಿ ಅಪ್ಲೋಡ್ ಮಾಡಬಹುದು.

Comments

Leave a Reply

Your email address will not be published. Required fields are marked *