ಇದ್ದ ಮನೆಯೂ ಬಿತ್ತು, ಮಸಾಶನವೂ ಬಂದಿಲ್ಲ: ಅಜ್ಜಿಯ ಕಣ್ಣೀರ ಕಥೆ

ಗದಗ: ಇದ್ದ ಒಂದು ಮನೆಯೂ ಬಿದ್ದಿದೆ, ಪ್ರತಿ ತಿಂಗಳು ಬರುತ್ತಿದ್ದ ಮಸಾಶನವೂ ನಿಂತಿದೆ ಎಂದು 76 ವರ್ಷದ ಅನಾಥ ವೃದ್ಧೆ ಕಣ್ಣೀರು ಹಾಕುತ್ತಿದ್ದಾರೆ. ಅಜ್ಜಿಯ ಪರಿಸ್ಥಿತಿ ನೋಡಿದ್ರೆ ಎಂತವರ ಕಣ್ಣಾಲಿಗಳು ತೇವಗೊಳ್ಳುತ್ತವೆ.

76 ವರ್ಷದ ಈರಮ್ಮ ದಿವಟರ್ ಅಜ್ಜಿ ಮಳೆಯಿಂದಾಗಿ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈರಮ್ಮ ಅಜ್ಜಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಟಕ್ಕೆದ ಮಸೀದಿ ಬಳಿಯ ಪುಟ್ಟ ಮನೆಯಲ್ಲಿ ವಾಸವಾಗಿದ್ದರು. ಯಾರ ಬಂಧುಗಳ ಮೇಲೆ ಅವಲಂಬನೆಯಾಗದ ಈರಮ್ಮ ಅಜ್ಜಿಗೆ ಸರ್ಕಾರ ನೀಡುವ ಮಸಾಶನ ಆಸರೆ ಆಗಿತ್ತು. ಈಗ ಅದು ಸಹ ಕಳೆದ ಮೂರು ತಿಂಗಳಿನಿಂದ ಬರುತ್ತಿಲ್ಲ.

ಇಷ್ಟು ದಿನ ಕೂಡಿಟ್ಟ ಹಣದಲ್ಲಿ ಹೇಗೋ ಜೀವನ ಮಾಡಿಕೊಂಡಿದ್ದ ಅಜ್ಜಿಯ ಮೇಲೆ ಮಳೆರಾಯ ಕೋಪಗೊಂಡ ಪರಿಣಾಮ ಇದ್ದೊಂದ ಮನೆಯ ಕುಸಿತವಾಗಿದೆ. ಹಳೆಕಾಲದ ಮಣ್ಣಿನ ಮನೆ ಆಗಿದ್ದರಿಂದ ಕಳೆದ ಕೆಲದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದಾಗಿ ಗೋಡೆ ಕುಸಿದಿದೆ.

ಮಕ್ಕಳು, ಮೊಮ್ಮಕ್ಕಳು ಯಾರೂ ಇಲ್ಲ. ನಿನ್ನೆ ಬೆಳಗ್ಗೆ ಮನೆ ಬಿದ್ದಿದ್ದರೂ, ಇದುವರೆಗೂ ಯಾವ ಅಧಿಕಾರಿಗಳು ನನ್ನ ಕಷ್ಟ ಕೇಳಲು ಬಂದಿಲ್ಲ. ಸರ್ಕಾರದ ಸಂಬಳ ಸಹ ಬಂದಿಲ್ಲ. ಏನ್ ಮಾಡೋದು ಇಲ್ಲೇ ಇರಬೇಕು ಎಂದು ಈರಮ್ಮ ಅಜ್ಜಿ ಕಣ್ಣೀರಿಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *