ಇಂದ್ರಜಿತ್ ಹೇಳಿಕೆಯಿಂದ ನನ್ನ ಮದುವೆಗೆ ತೊಂದರೆಯಾಗಿದೆ: ಯುವ ನಟ ಪವನ್ ಶೌರ್ಯ

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಯಿಂದ ನನ್ನ ಮದುವೆಗೆ ತೊಂದರೆಯಾಗಿದೆ ಎಂದು ಯುವ ನಟ ಪವನ್ ಶೌರ್ಯ ಆರೋಪ ಮಾಡಿದ್ದಾರೆ.

ಸ್ಯಾಂಡಲ್‍ವುಡ್ ಮೂರನೇ ಪೀಳಿಗೆಯ ಯುವ ನಟ-ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಶನಿವಾರ ಇಂದ್ರಜಿತ್ ಲಂಕೇಶ್ ಅವರು ಬಹಿರಂಗ ಆರೋಪ ಮಾಡಿದ್ದರು. ಈಗ ಇದೇ ವಿಚಾರ ಬಹಳ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಲಂಕೇಶ್ ಅವರ ಈ ಹೇಳಿಕೆ ನಮಗೆ ಸಮಸ್ಯೆಯನ್ನು ಹುಟ್ಟುಹಾಕಿದೆ ಎಂದು ಪವನ್ ಶೌರ್ಯ ಹೇಳಿದ್ದಾರೆ.

ಮುಂದಿನ ತಿಂಗಳು ನನ್ನ ಮದುವೆ ಡೇಟ್ ಫಿಕ್ಸ್ ಆಗಿದೆ. ಈಗ ಟಿವಿಯಲ್ಲಿ ಎಲ್ಲೇ ನೋಡಿದರೂ ಸ್ಯಾಂಡಲ್‍ವುಡ್ ಡ್ರಗ್ಸ್ ಸ್ಟೋರಿಯನ್ನೇ ಹಾಕುತ್ತಿದ್ದಾರೆ. ಅದರಲ್ಲೂ ಯುವ ನಟರು ಎಂದು ಹೇಳುತ್ತಿದ್ದಾರೆ. ಇದರಿಂದ ನನ್ನ ಮದುವೆಗೂ ತೊಂದರೆಯಾಗಿದೆ. ನಮ್ಮ ಭಾವಿ ಪತ್ನಿ ಮನೆಯವರು ತುಂಬ ಸೂಕ್ಷ್ಮ ಅವರು ಹೆದರಿಕೊಳ್ಳುತ್ತಿದ್ದಾರೆ. ಮದುವೆಯೇನು ಕ್ಯಾನ್ಸಲ್ ಆಗಿಲ್ಲ. ಅದರೂ ಅವರು ಟಿವಿ ನೋಡಿ ಭಯಪಡುತ್ತಿದ್ದಾರೆ ಎಂದು ಪವನ್ ಶೌರ್ಯ ಅವರು ತಿಳಿಸಿದ್ದಾರೆ.

ನಮ್ಮ ಚಿತ್ರರಂಗದಲ್ಲಿ ಯಾರದರೂ ಡ್ರಗ್ಸ್ ವ್ಯವಹಾರ ಮಾಡುತ್ತಿದ್ದರೆ ಅವರನ್ನು ಹಿಡಿಯಲಿ ಶಿಕ್ಷೆ ಕೊಡಿಸಲಿ. ಅದನ್ನು ಬಿಟ್ಟು ನಮ್ಮವರ ಬಗ್ಗೆ ನಾವೇ ಈ ರೀತಿ ಹೇಳಬಾರದು. ಡ್ರಗ್ಸ್ ಬಗ್ಗೆ ತನಿಖೆ ಮಾಡಲು ಪೊಲೀಸ್, ಸಿಸಿಬಿ ಇಲಾಖೆಗೆಳು ಇವೆ. ಅವರು ಮಾಡಬೇಕು ಇಂದ್ರಜಿತ್ ಅವರು ಈ ರೀತಿ ಹೇಳಿದ್ದು, ಸರಿಯಲ್ಲ. ಇದರಿಂದ ನಮ್ಮ ಮನೆಯಲ್ಲಿ ಶೂಟಿಂಗ್‍ಗೆ ಹೋಗಬೇಡ ಎನ್ನುತ್ತಿದ್ದಾರೆ. ನನ್ನಂತೆಯೇ ಹಲವಾರು ಯುವ ನಟರಿಕೆ ಈ ಹೇಳಿಕೆಯಿಂದ ತೊಂದರೆಯಾಗಿದೆ ಎಂದು ಪವನ್ ಶೌರ್ಯ ಹೇಳಿದ್ದಾರೆ.

ಹಾಲು ತುಪ್ಪ, ಉಡುಂಬಾ, ಗೂಳಿಹಟ್ಟಿ ಸಿನಿಮಾಗಳಲ್ಲಿ ಪವನ್ ಶೌರ್ಯ ನಾಯಕನಾಗಿ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *