ಇಂದು ರಾಗಿಣಿಗೆ ಜಾಮೀನು ಭಾಗ್ಯವಿಲ್ಲ – ಸೆ.16ಕ್ಕೆ ಮುಂದೂಡಿಕೆ

ಬೆಂಗಳೂರು: ನಟಿ ರಾಗಿಣಿಗೆ ಇಂದು ಜಾಮೀನು ಭಾಗ್ಯವಿಲ್ಲ. ಜಾಮೀನು ಅರ್ಜಿಯ ವಿಚಾರಣೆ ಸೆ.16ಕ್ಕೆ ಮುಂದೂಡಲಾಗಿದೆ.

ಸರ್ಕಾರಿ ವಕೀಲರು ಜಾಮೀನು ಅರ್ಜಿಯ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್‌ ಬುಧವಾರಕ್ಕೆ ಜಾಮೀನು ಅರ್ಜಿಯನ್ನು ಮುಂದೂಡಿದೆ. ಇದನ್ನೂ ಓದಿ: ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

ರಾಜ್ಯ ಸರ್ಕಾರ ಕಳೆದ ವಾರ ಅಭಿಯೋಜಕರನ್ನು ನೇಮಕ ಮಾಡಿದೆ. ಅವರು ಬಂದು ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಪ್ರಕರಣ ತನಿಖಾ ಹಂತದಲ್ಲಿದೆ. ತನಿಖಾ ಹಂತದಲ್ಲಿ ಇರುವ ಕಾರಣ ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕೇಳಿದರು. ಸಿಸಿಬಿ ಪರ ವಕೀಲರ ವಾದವನ್ನು ಪುರಸ್ಕರಿಸಿದ ಕೋರ್ಟ್‌ ಜಾಮೀನು ಅರ್ಜಿಯನ್ನು ಸೆ.16ಕ್ಕೆ ಮುಂದೂಡಿತು.

ರಾಗಿಣಿ ಸೇರಿದಂತೆ 14 ಆರೋಪಿಗಳ ವಿರುದ್ಧ ನಾರ್ಕೊಟಿಕ್‌ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್ (ಎನ್‍ಡಿಪಿಎಸ್) ಆ್ಯಕ್ಟ್ ಸೆಕ್ಷನ್ 21, 21ಸಿ, 27ಎ, 27ಬಿ, 29, ಐಪಿಸಿ 120ಬಿ ಅಡಿ ಕೇಸ್‌ ದಾಖಲಾಗಿದೆ. ಈ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿರುವ ಕಾರಣ ಜಾಮೀನು ಕಷ್ಟ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ಯಾವ ಸೆಕ್ಷನ್‌ ಏನು ಹೇಳುತ್ತದೆ?
ಎನ್‍ಡಿಪಿಎಸ್ 21 – ಮಾದಕ ವಸ್ತುಗಳನ್ನು ಅಕ್ರಮವಾಗಿ ತಯಾರು ಮಾಡುವುದು, ಮಾರಾಟ ಮಾಡುವುದು, ಸಾಗಾಟ ಮಾಡುವುದು ಅಪರಾಧ.

ಎನ್‍ಡಿಪಿಎಸ್ 21ಸಿ – ವಾಣಿಜ್ಯ ಉದ್ದೇಶಕ್ಕಾಗಿ ಮಾದಕವಸ್ತುಗಳ ಸಂಗ್ರಹಣೆ ಮತ್ತು ಮಾರಾಟ ಮಾಡುವುದು ನಿಷಿದ್ಧ. ಆರೋಪ ಸಾಬೀತಾದರೆ 10 ವರ್ಷಕ್ಕೆ ಮೇಲ್ಪಟ್ಟು ಶಿಕ್ಷೆ

ಎನ್‍ಡಿಪಿಎಸ್ 27 ಎ – ಮಾದಕ ವಸ್ತುಗಳಿಗೆ ಸಂಬಂಧಿಸಿ ಹಣಕಾಸು ನೆರವು. ನೇರವಾಗಿ ಅಥವಾ ಪರೋಕ್ಷವಾಗಿ ಅಥವಾ ಮಾದಕ ವಸ್ತು ಸಾಗಣಿಕೆಗೆ ನೆರವಾಗುವುದು ಅಪರಾಧ.

ಎನ್‍ಡಿಪಿಎಸ್ 27 ಬಿ – ಮಾದಕವಸ್ತು ಸೇವನೆ ಕೂಡ ಅಪರಾಧ. ಆರು ತಿಂಗಳ ಶಿಕ್ಷೆ ಅಥವಾ 10 ಸಾವಿರ ದಂಡ.

ಎನ್‍ಡಿಪಿಎಸ್ 29 – ಅಪರಾಧಿಕ ಒಳ ಸಂಚಿಗೆ ಸಹಾಯ ಮಾಡುವುದು. ಅಂತೆಯೇ ಒಳ ಸಂಚು ಮಾಡಲು ವೇದಿಕೆ ಕಲ್ಪಿಸುವುದು ಪಾರ್ಟಿ ಆಯೋಜನೆ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧ.

ಐಪಿಸಿ 120 ಬಿ – ಅಪರಾಧಿಕ ಒಳಸಂಚು.

Comments

Leave a Reply

Your email address will not be published. Required fields are marked *