ಉದಯೋನ್ಮುಖ ಹಿನ್ನೆಲೆ ಗಾಯಕಿ, ಸರಿಗಮಪ ಸೀಸನ್ 13ರ ಸೆಮಿಫೈನಲಿಸ್ಟ್ ಮೈತ್ರಿ ಅಯ್ಯರ್ ತಮ್ಮ ಬಗ್ಗೆ ಒಂದಿಷ್ಟು ವಿಚಾರಗಳನ್ನು ನಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ. ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮೈತ್ರಿ ಅಯ್ಯರ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.

• ನಿಮ್ಮ ಪರಿಚಯ ಹಾಗೂ ಕುಟುಂಬದ ಬಗ್ಗೆ ಹೇಳಿ?
ನಾನು ಹುಟ್ಟಿ ಬೆಳೆದಿದ್ದು ಗುಂಡ್ಲುಪೇಟೆಯಲ್ಲಿ. ನನ್ನ ತಂದೆ ಆರ್. ಮಾಧವನ್ ತಾಯಿ ಲಕ್ಷ್ಮಿ, ನನಗೆ ಒಬ್ಬಳು ಸಹೋದರಿ ಇದ್ದಾಳೆ. ನಾನೀಗ ಬಿಕಾಂ ಮುಗಿಸಿ ಎಂಬಿಎ ಓದುತ್ತಿದ್ದೇನೆ. ಜೊತೆಗೆ ಹಿನ್ನೆಲೆ ಗಾಯಕಿಯಾಗಿಯೂ ನನ್ನನ್ನು ತೊಡಗಿಸಿಕೊಂಡಿದ್ದೇನೆ. ನನ್ನ ತಂದೆ ತಾಯಿಗೆ ಹಾಗೂ ನನ್ನ ಕುಟುಂಬದಲ್ಲಿ ಸಂಗೀತದ ಮೇಲೆ ಅಪಾರವಾದ ಒಲವಿದೆ. ತಂದೆ ಹಾಡುಗಾರರಾಗಿದ್ದರಿಂದ ನನ್ನನ್ನು ಕೂಡ ಹಾಡುವಂತೆ ಪ್ರೇರೆಪಿಸಿತು.

• ಸಂಗೀತದ ಮೇಲೆ ಒಲವು ಬಾಲ್ಯದಲ್ಲೇ ಶುರುವಾಗಿದ್ದಾ?
ನಮ್ಮ ಮನೆಯಲ್ಲಿ ಎಲ್ಲರಿಗೂ ಸಂಗೀತ ಅಂದ್ರೆ ವಿಶೇಷ ಪ್ರೀತಿ. ನಮ್ಮ ತಂದೆ ಆರ್ಕೆಸ್ಟ್ರಾದಲ್ಲಿ ಹಾಡ್ತಾ ಇದ್ರು. ಹಾಗಾಗಿ ಮನೆಯಲ್ಲಿ ಸಂಗೀತ ಕಲಿಕೆಗೆ ಅವಕಾಶವಿತ್ತು. ನಾನು ನಸರ್ರಿಯಲ್ಲಿ ಇದ್ದಾಗ ಡಾನ್ಸ್ ಕ್ಲಾಸ್ ಗೆ ಹೋಗುತ್ತಿದ್ದೆ. ಡಾನ್ಸ್ ಮಾಡುವಾಗ ನಾನು ಹಾಡುತ್ತಿದ್ದುದ್ದನ್ನು ಗಮನಿಸಿ ನಮ್ಮ ಟೀಚರ್ ನಮ್ಮ ತಂದೆ ತಾಯಿಗೆ ತಿಳಿಸಿದ್ರು. ಆಗ ನಮ್ಮ ತಂದೆ ನನ್ನ ದನಿ ಕೇಳಿ ಹಾಡಿನ ಬಗ್ಗೆ ಒಲವಿರಬೇಕು ಎಂದು ಸಂಗೀತ ಅಭ್ಯಾಸ ಮಾಡಿಸಲು ಆರಂಭಿಸಿದ್ರು. ಡಾನ್ಸ್ ಕಲಿಯಲು ಹೋಗಿ ಪರ್ಮನೆಂಟ್ ಸಿಂಗರ್ ಆದೆ ಅಂದ್ರೆ ತಪ್ಪಾಗೋದಿಲ್ಲ.

• ನಿಮ್ಮ ಸಂಗೀತದ ಮೊದಲ ಗುರುಗಳು ಯಾರು?
ತಂದೆಯೇ ನನ್ನ ಮೊದಲ ಗುರು. ಅವರು ಪ್ರತಿನಿತ್ಯ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ರು. ಅವರಿಗೆ ಸಂಗೀತ ಜ್ಞಾನ ಇತ್ತು ಅವರೇ ನನಗೆ ಹೇಳಿಕೊಡುತ್ತಿದ್ರು. ಅದು ಅಲ್ದೆ ಗುಂಡ್ಲುಪೇಟೆಯಲ್ಲಿ ಆಗ ಯಾವುದೇ ಸಂಗೀತ ಶಾಲೆ ಇರಲಿಲ್ಲ ಹಾಗಾಗಿ ಐದನೇ ತರಗತಿವರೆಗೂ ತಂದೆಯವರೇ ನನಗೆ ಸಂಗೀತ ಹೇಳಿಕೊಡುತ್ತಿದ್ದರು. ಕ್ಯಾಸೆಟ್, ಸಿಡಿ ತಂದು ನನ್ನ ಬಳಿ ಹಾಡಿಸಿ ರೆಕಾರ್ಡ್ ಮಾಡಿಸಿ ನನಗೆ ಕೇಳಿಸುತ್ತಿದ್ರು. ಆ ಮೂಲಕ ನನ್ನ ತಪ್ಪುಗಳನ್ನು ತಿದ್ದುತ್ತಿದ್ರು. ನಾನು ಐದನೇ ತರಗತಿಯಲ್ಲಿದ್ದಾಗ ಆರ್.ಮಹೇಂದರ್ ಬಳಿ ಸುಗಮ ಸಂಗೀತ ಕಲಿಯಲು ನನ್ನನ್ನು ಸೇರಿಸಿದ್ರು. ಆರ್.ಮಹೇಂದರ್ ನನ್ನ ಸಂಗೀತದ ಎರಡನೇ ಗುರುಗಳು.
• ಬಾಲ್ಯದಲ್ಲಿ ಹಾಡಲು ಸಿಕ್ಕ ಅವಕಾಶಗಳನ್ನು ಹೇಗೆ ಬಳಸಿಕೊಂಡ್ರಿ?
ನನ್ನ ಹಾಡು ಕೇಳಿ ನಮ್ಮೂರಿನಲ್ಲಿ ಯಾವುದೇ ಕಾರ್ಯಕ್ರಮ ಇದ್ರು ನನ್ನನ್ನು ಹಾಡಲು ಕರೆಸುತ್ತಿದ್ರು. ಗಣೇಶ ಹಬ್ಬಕ್ಕೆ, ಬ್ಯಾಂಕಿನಲ್ಲಿ ಪೂಜೆ ಇದ್ದಾಗ, ಶಾಲಾ ಕಾರ್ಯಕ್ರಮಗಳಲ್ಲಿ ನಾನೇ ಮೊದಲು ಹಾಡುತ್ತಿದ್ದೆ ಹೀಗಾಗಿ ಸ್ಟೇಜ್ ಫಿಯರ್ ಸಮಸ್ಯೆ ನನ್ನನ್ನು ಕಾಡಲಿಲ್ಲ.

• ಹಿನ್ನೆಲೆ ಗಾಯಕಿಯಾಗಿ ಚಂದನವನದಲ್ಲಿ ಯಾವ ಯಾವ ಸಿನಿಮಾಗಳಿಗೆ ದನಿಯಾಗಿದ್ದೀರಾ?
ಸರಿಗಮಪ ವೇದಿಕೆಯಿಂದಾಗಿ ನನಗೆ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡೋ ಅವಕಾಶ ದಕ್ಕಿತು. ನಡುವೆ ಅಂತವಿರಲಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಭರತ ಬಾಹುಬಲಿ, ಅವಲಕ್ಕಿ ಪವಲಕ್ಕಿ ಸಿನಿಮಾಗಳಿಗೆ ಹಾಡಿದ್ದೇನೆ. ಗುಬ್ಬಿ ಮೇಲೆ ಬ್ರಹಾಸ್ತ್ರ ಚಿತ್ರದ ಹಾಡಿಗೆ ಮಿರ್ಚಿ ಅಪ್ ಕಮಿಂಗ್ ಸಿಂಗರ್ ಅವಾರ್ಡ್ ನನಗೆ ಸಿಕ್ಕಿದೆ.

• ಚಿಕ್ಕಂದಿನಿಂದಲೇ ನೀವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ರಂತೆ?
ಹೌದು, ಉದಯ ಟಿವಿಯ ಅಕ್ಷರ ಮಾಲೆ ಕಾರ್ಯಕ್ರಮದವರು ನಮ್ಮೂರಿಗೆ ಆಡಿಷನ್‍ಗೆ ಬಂದಿದ್ರು ನಾನು ಅದರಲ್ಲಿ ಹಾಡಿದ್ದೆ, ಅವರು ನನಗೆ ಹಾಡು ಬಾ ಕೋಗಿಲೆಯಲ್ಲಿ ಬಂದು ಹಾಡಲು ಅವಕಾಶ ನೀಡಿದ್ರು. ಅದಾದ ನಂತರ ಉದಯ ಸಿಂಗರ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡೆ. ಡಿಗ್ರಿ ಓದುತ್ತಿದ್ದಾಗ ಸರಿಗಮಪನಲ್ಲಿ ಸ್ಪರ್ಧಿಸಿದೆ. ನಿಜ ಹೇಳಬೇಕು ಎಂದರೆ ನಾನು ಮೊದಲೆಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದೆ. ನನ್ನ ಗುರುಗಳಾದ ಆರ್.ಮಹೇಂದರ್ ಅವರು ನನಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡಿ ಹುರಿದುಂಬಿಸುತ್ತಿದ್ರು ಇದು ನನಗೆ ತುಂಬಾ ಸಹಾಯವಾಯಿತು.

• ಸರಿಗಮಪ ವೇದಿಕೆ ನಿಮ್ಮ ಸಿಂಗಿಂಗ್ ಕೆರಿಯರ್ ಗೆ ಹೊಸ ಸ್ಪರ್ಶ ನೀಡಿದೆ. ಇದ್ರ ಬಗ್ಗೆ ಹೇಳಿ.
ನಾನು ಚಿಕ್ಕಂದಿನಿಂದಲೂ ಹಲವು ಶೋಗಳಲ್ಲಿ ಭಾಗವಹಿಸಿದ್ರೂ ಕೂಡ ಸರಿಗಮಪ ಸೀಸನ್ 13 ನನ್ನ ಕೆರಿಯರ್ ಗೆ ಬಿಗ್ ಬ್ರೇಕ್ ಕೊಡ್ತು. ಸಂಗೀತಕ್ಕೆ ಸಂಬಂದ ಪಟ್ಟ ಸೂಕ್ಷ್ಮ ವಿಚಾರಗಳನ್ನು ನಾನಿಲ್ಲಿ ಕಲಿತು ಕೊಂಡೆ, ಸುಚೇಂತನ್ ಸರ್ ಇಲ್ಲಿ ಎಲ್ಲರಿಗೂ ತರಬೇತಿ ನೀಡುತ್ತಿದ್ರು. ಒಂದು ಹಾಡನ್ನು ಹೇಗೆ ಭಾವ ತುಂಬಿ ಜೀವ ತುಂಬಿ ಹಾಡಬೇಕು ಅನ್ನೋದನ್ನ ಅವರು ನಮಗೆ ಕಲಿಸಿದ್ರು. ಮೊದಲೆಲ್ಲ ಹಾಡು ಕಲಿತು ಸುಮ್ಮನೆ ಹಾಡುತ್ತಿದ್ದೆ ಆದ್ರೆ ಸರಿಗಮಪ ಬಂದ ಮೇಲೆ ಒಂದು ಹಾಡನ್ನು ಅನುಭವಿಸಿ ಹಾಡುವುದು ಹೇಗೆ ಅನ್ನೋದನ್ನ ಕಲಿತೆ. ನನ್ನಲ್ಲಿ ಹಲವಾರು ಬದಲಾವಣೆಯನ್ನು ಸರಿಗಮಪ ವೇದಿಕೆ ತಂದಿದೆ. ಆರಂಭದಲ್ಲಿ ಒಂದೆರಡು ರೌಂಡ್ ಇರ್ತೀನಿ ಅಂದುಕೊಂಡಿದ್ದೆ ಆದ್ರೆ ಆ ವೇದಿಕೆ ನನ್ನಲ್ಲಿ ತುಂಬಿದ ಹೊಸ ಛಲ ಸೆಮಿಫೈನಲ್ ವರೆಗೂ ಕರೆದುಕೊಂಡು ಹೋಯ್ತು.
• ಸಿನಿಮಾದಲ್ಲಿ ಮೊದಲು ಅವಕಾಶ ಸಿಕ್ಕ ಅನುಭವ ಹೇಗಿತ್ತು?
ನನಗೆ ಸಿನಿಮಾ ಹಾಡಿಗೆ ಮೊದಲ ಅವಕಾಶ ಸಿಕ್ಕಿದ್ದು, ನಡುವೆ ಅಂತರವಿರಲಿ ಚಿತ್ರಕ್ಕೆ. ಕದ್ರಿ ಮಣಿಕಾಂತ್ ಸರ್ ಸಂಗೀತ ಸಂಯೋಜನೆ ನೀಡುತ್ತಿದ್ದಾರೆ ನೀವು ಒಂದು ಹಾಡನ್ನು ಹಾಡಬೇಕು ಎಂದಾಗ ನನ್ನ ಖುಷಿಗೆ ಎಲ್ಲೆ ಇರಲಿಲ್ಲ. ನಾನು ಸವಾರಿ-2 ಸಿನಿಮಾದಲ್ಲಿ ಕದ್ರಿ ಮಣಿಕಾಂತ್ ಸರ್ ಅವರ ಮ್ಯೂಸಿಕ್ ಗೆ ಫಿದಾ ಆಗಿದ್ದೆ, ಅವರ ಸಿನಿಮಾದಲ್ಲಿ ಹಾಡಬೇಕು ಎಂದು ಕನಸಿತ್ತು. ಮೊದಲ ಅವಕಾಶ ಅವರ ಬಳಿ ಸಿಕ್ಕಿದ್ದರಿಂದ ತುಂಬಾ ಖುಷಿಯಾಯಿತು. ಅವರು ನನನ್ನು ತುಂಬಾ ಚೆನ್ನಾಗಿ ತಿದ್ದಿದ್ರು. ಸಿನಿಮಾಗೆ ಯಾವ ರೀತಿ ಹಾಡಬೇಕು ಅನ್ನೋದನ್ನ ಕಲಿಸಿಕೊಟ್ರು. ಅವರ ಜೊತೆ ಕೆಲಸ ಮಾಡಲು ತುಂಬಾ ಖುಷಿಯಾಗುತ್ತೆ.

• ಹಾಡುವುದನ್ನು ಬಿಟ್ಟು ನಿಮ್ಮಿಷ್ಟದ ಹವ್ಯಾಸವೇನು?
ನನಗೆ ಡಾನ್ಸ್ ಅಂದ್ರೆ ತುಂಬಾ ಇಷ್ಟ. ಎಸ್‍ಎಸ್‍ಎಲ್‍ಸಿ ವರೆಗೂ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ಇದ್ರು ನಾನೇ ಭಾಗವಹಿಸುತ್ತಿದ್ದೆ. ಒಂದು ವರ್ಷ ಭರತನಾಟ್ಯವನ್ನು ಕಲಿತಿದ್ದೇನೆ. ಹಾಡಿನ ಕಡೆ ಹೆಚ್ಚು ಗಮನ ಹರಿಸಿದ್ರಿಂದ ಡಾನ್ಸ್ ಫೂರ್ಣ ಪ್ರಮಾಣದಲ್ಲಿ ಕಲಿಯಲು ಆಗಲಿಲ್ಲ. ಅದನ್ನು ಹೊರತು ಪಡಿಸಿ ಟ್ರಾವೆಲ್ ಮಾಡೋದು ತುಂಬಾ ಖುಷಿ ಕೊಡುತ್ತೆ. ಇಲ್ಲಿವರೆಗೆ ಕರ್ನಾಟಕದ ಒಂದಿಷ್ಟು ಸ್ಥಳಗಳನ್ನ ಜೊತೆಗೆ ಗೋವಾ, ಮುಂಬೈ, ಕತಾರ್ ನೋಡಿದ್ದೇನೆ ಇನ್ನೂ ತುಂಬಾ ನೋಡೋದಿದೆ. ಸಮಯ ಸಿಕ್ಕಾಗಲೆಲ್ಲ ಟ್ರಾವೆಲ್ ಮಾಡುತ್ತಿರುತ್ತೇನೆ.

• ನಿಮ್ಮ ಇಷ್ಟದ ಗಾಯಕ/ಗಾಯಕಿ ಯಾರು?
ನನಗೆ ಇಂತವರೇ ಅಂತ ಏನಿಲ್ಲ. ಎಲ್ಲಾ ಗಾಯಕ, ಗಾಯಕಿಯರು ಇಷ್ಟ. ಪ್ರತಿಯೊಬ್ಬರಿಂದ ನಾವು ಕಲಿಯೋದು ತುಂಬಾ ಇದೆ. ಅವರ ಹಾಡುಗಳೆಲ್ಲ ನಮಗೆ ಸ್ಪೂರ್ತಿ. ಅದರಲ್ಲೂ ಜಾನಕಿ ಮೇಡಂ ಅಂದ್ರೆ ನಂಗೆ ತುಂಬಾ ಇಷ್ಟ.
• ನಿಮ್ಮ ಅಚ್ಚುಮೆಚ್ಚಿನ ಹಾಡುಗಳು ಯಾವುದು?
ಇಂದು ಎನಗೆ ಗೋವಿಂದ ಹಾಗೂ ತನುಕರಗದವರಲ್ಲಿ ಈ ಎರಡು ಹಾಡುಗಳು ನನಗೆ ಮೋಸ್ಟ್ ಫೇವರೇಟ್. ಖುಷಿ, ಬೇಸರ ಯಾವುದೇ ಇರಲಿ ಈ ಹಾಡುಗಳನ್ನ ನಾನು ಯಾವಾಗಲು ಹಾಡುತ್ತಿರುತ್ತೇನೆ.
• ನಿಮ್ಮ ಇಷ್ಟದ ನಟ, ನಟಿ ಯಾರು?
ನನಗೆ ಪುನೀತ್ ರಾಜ್‍ಕುಮಾರ್ ಎಂದರೆ ತುಂಬಾ ಇಷ್ಟ. ಕತಾರ್ ನಲ್ಲಿ ಹಾಡಲು ಹೋದಾಗ ಅವರೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಅಲ್ಲಿ ಅವರನ್ನು ಭೇಟಿಯಾಗೋ ಅವಕಾಶ ಸಿಕ್ಕಿತು. ಗುಂಡ್ಲುಪೇಟೆಯವಳು ಎಂದಾಗ ತುಂಬಾ ಪ್ರೀತಿಯಿಂದ ಮಾತನಾಡಿಸಿದ್ರು. ಅವರ ಸರಳತೆಯ ಗುಣ ನನಗೆ ತುಂಬಾ ಇಷ್ಟ. ನಟಿಯರಲ್ಲಿ ಮೋಹಕ ತಾರೆ ರಮ್ಯ ನನ್ನ ಆಲ್‍ಟೈಂ ಫೇವರೇಟ್.
• ಮೈತ್ರಿ ಐಯ್ಯರ್ ಸಿಂಗರ್ ಆಗಿರದಿದ್ರೆ ಏನಾಗಿ ಇರ್ತಿದ್ರು?
ನನಗೆ ಸಿನಿಮಾ ಇಂಡಸ್ಟ್ರಿ ತುಂಬಾ ಇಷ್ಟ. ಸಿಂಗರ್ ಆಗಿರದಿದ್ರೆ ಕಲಾವಿದೆಯಾಗಿಯೋ, ನಟಿಯಾಗಿಯೋ ಯಾವುದೋ ಒಂದು ರೀತಿಯಲ್ಲಿ ಒಟ್ಟಿನಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲೇ ನಾನು ಕಾಣಸಿಗುತ್ತಿದ್ದೆ. ಇಲ್ಲಿ ಕೆಲಸ ಮಾಡೋದು ನನಗೆ ತುಂಬ ಖುಷಿ ಕೊಡುತ್ತೆ.


Leave a Reply