ಇಂದಿಗೂ ಅಂದಿನ ಕಾರ್ಗಿಲ್ ಯುದ್ಧವೇ ನೆನಪಾಗುತ್ತೆ: ಹುತಾತ್ಮ ಯೋಧ ಕಾವೇರಪ್ಪನ ಪತ್ನಿ

– ಅವರು ದೇಶಕ್ಕಾಗಿ ಪ್ರಾಣ ಬಿಟ್ಟರು ನಾವು ಏನು ಮಾಡಿದ್ದೇವೆ?

ಮಡಿಕೇರಿ: ಇಂದು ಜುಲೈ 26 ಇಡೀ ದೇಶವೇ ಮರೆಯದ ದಿನ. 1999ರಲ್ಲಿ ಪಾಪಿಸ್ತಾನದ ಶತ್ರುಗಳ ಎದೆಸೀಳಿದ ಭಾರತೀಯ ಸೈನಿಕರ ಜೊತೆಯಲ್ಲಿ ವೀರರ ನಾಡು ಕೊಡಗಿನ ಸೈನಿಕ ಕಾವೇರಪ್ಪ ಇದ್ದರು. ಶತ್ರುಗಳ ವಿರುದ್ಧ ಹೋರಾಡುತ್ತಲೇ ವೀರ ಮರಣ ಹೊಂದಿದ್ದರು.

ಕೊಡಗು ಎಂದ ಕೂಡಲೇ ನೆನಪಾಗೋದೆ ಇಲ್ಲಿನ ವೀರತ್ವ. ಭಾರತೀಯ ಸೇನೆಗೆ ಕೊಡಗಿನ ಜನತೆ ವಿಶೇಷ ಸೇವೆ ನೀಡಿದೆ. ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತ ಮಹಾನ್ ವ್ಯಕ್ತಿಗಳನ್ನು ನೀಡಿದ ಜಿಲ್ಲೆ ಕೊಡಗು. ಹಾಗೆಯೇ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳೊಂದಿಗೆ ಹೋರಾಡುತ್ತಲೇ ವೀರಮರಣವನ್ನಪ್ಪಿದ ಹುತಾತ್ಮರು ಇದ್ದಾರೆ.

ಹೌದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮೈತಡಿ ಗ್ರಾಮದ ಕಾವೇರಪ್ಪ ಭಾರತೀಯ ಸೇನೆಗೆ ಸೇರಿ 7 ವರ್ಷಗಳ ಕಾಲ ಶತ್ರುಗಳ ವಿರುದ್ಧ ಹೋರಾಡಿದ್ದರು. ಸೇನೆಗೆ ಸೇರಿದ್ದ ಕೆಲವೇ ವರ್ಷಗಳಲ್ಲಿ ಶೋಭಾ ಅವರನ್ನು ವರಿಸಿದ್ದರು. ಇನ್ನು ಏಳೆಂಟು ವರ್ಷ ಸೇನೆಯಲ್ಲಿ ದುಡಿದು ಜಿಲ್ಲೆಗೆ ವಾಪಸ್ ಆಗಲು ನಿರ್ಧರಿಸಿದ್ದರು. ಇದನ್ನು ಓದಿ: 16 ದಿನ ಊಟ, ಸ್ನಾನವಿಲ್ಲದೆ ಕೆಚ್ಚೆದೆಯ ಹೋರಾಟ – ಕಾರ್ಗಿಲ್ ಗೆದ್ದು ಬಂದ ಸೇನಾನಿಯ ರೋಚಕ ಕಥೆ

ಆದರೆ 1999ರಲ್ಲಿ ಪಾಕಿಗಳ ಎದುರು ಕಾರ್ಗಿಲ್‍ನಲ್ಲಿ ಹತ್ತಾರು ದಿನಗಳ ಶತ್ರುಗಳ ಎದೆ ಸೀಳಿ ಭಾರತಾಂಬೆಯ ರಕ್ಷಣೆಗೆ ನಿಂತಿದ್ದರು. ಆದರೆ ಪಾಪಿ ಪಾಕಿಸ್ತಾನದ ಕುತಂತ್ರದಿಂದ ಕೊಡಗಿನ ವೀರ ಯೋಧ ಕಾವೇರಪ್ಪ ಹುತಾತ್ಮರಾಗಿದ್ದರು. ತಾನು ಮದುವೆಯಾದ ಸ್ವಲ್ಪ ದಿನಕ್ಕೆ ಅವರು ಕರ್ತವ್ಯದ ನಿಮಿತ್ತ ತೆರಳಿದರು. ಮತ್ತೆ ನಾನು ಅವರನ್ನು ನೋಡಲು ಸಾಧ್ಯವಾಗದೆ, ಹುತಾತ್ಮರಾದಾಗ ನನ್ನ ನೋವು ಯಾರಿಗೂ ಹೇಳ ತೀರದು ಎಂದು ಕಾವೇರಪ್ಪ ಅವರ ಪತ್ನಿ ಶೋಭ ಅವರು ಕಣ್ಣೀರು ಹಾಕುತ್ತಾರೆ.

ಇಂದಿಗೂ ಅಂದಿನ ಕಾರ್ಗಿಲ್ ಯುದ್ಧವೇ ನೆನಪಾಗುತ್ತೆ. ಅಂದು ನಾನಷ್ಟೆ ಅಲ್ಲ, ನನಗಿಂತ ಚಿಕ್ಕ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪತಿಯರನ್ನು ಕಳೆದುಕೊಂಡಿದ್ದಾರೆ. ಆ ನೋವುಗಳು ಇಂದಿಗೂ ತೀವ್ರವಾಗಿ ಕಾಡುತ್ತವೆ. ದೇಶಕ್ಕಾಗಿ ಅವರು ಪ್ರಾಣವನ್ನೇ ತೆತ್ತರು. ನಾನು ದೇಶಕ್ಕಾಗಿ ಏನು ಕೊಟ್ಟೆದ್ದೇನೆ ಎನ್ನುವ ಪ್ರಶ್ನೆಗಳು ಕಾಡುತ್ತವೆ. ಭಾರತವು ಕಾರ್ಗಿಲ್ ಅನ್ನು ಜಯಿಸಿದ ದಿನ ಇಂದಿಗೂ ಮೈತಡಿಯಲ್ಲಿರುವ ನನ್ನ ಪತಿಯ ಸಮಾಧಿ ಮುಂದೆ ನಿಂತು ನಮಸ್ಕರಿಸುತ್ತೇನೆ. ಕೊಡಗಿನಲ್ಲಿ ಸೇನೆಗೆ ಅಪಾರ ಸೇವೆ ಸಲ್ಲಿಸಿದವರಿದ್ದಾರೆ. ಆದರೆ ಇತ್ತೀಚೆಗೆ ಸೇನೆಗೆ ಸೇರುವವರ ಸಂಖ್ಯೆಯೇ ಕಡಿಮೆ ಆಗಿದೆ ಎಂದು ಶೋಭಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *