ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗ್ತಿದೆ – ಸರ್ಕಾರದ ವಿರುದ್ಧ ಹಳ್ಳಿಹಕ್ಕಿ ಅಸಮಾಧಾನ

ಮೈಸೂರು: ರಾಜ್ಯದಲ್ಲಿ ಜೂನ್ 7ರ ನಂತರವೂ ಲಾಕ್‍ಡೌನ್ ಮುಂದುವರಿಕೆ ಬಗ್ಗೆ ಕೆಲ ಸಚಿವರು ನೀಡುತ್ತಿರುವ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ಮುಂದುವರಿಸುವುದು ಸರಿಯಲ್ಲ. ಸರಿಯಾದ ಪ್ಯಾಕೇಜ್ ಸಹ ಕೊಟ್ಟಿಲ್ಲ. ಈಗ ಜನ ಕೊರೊನಾದಿಂದ ಸಾಯುತ್ತಿದ್ದಾರೆ ಆಮೇಲೆ ಸಮಸ್ಯೆಯಿಂದ ಜನ ಸಾಯುತ್ತಾರೆ. ನಾಯಕತ್ವದ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ. ಈ ವಿಚಾರದ ಗೊಂದಲ ಮುಂದುವರಿಸಲು ಲಾಕ್ ಡೌನ್ ಅನ್ನು ರಕ್ಷಣೆಯಾಗಿ ಪಡೆಯೋದು ಬೇಡ ಎಂದರು.

ರಾಜ್ಯದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ. ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದಿರಿ. ಇಬ್ಬರನ್ನು ಹಾಸಿಗೆ ಮಂತ್ರಿ ಮಾಡಿದ್ದೀರಿ. ಒಬ್ಬ ಆಕ್ಸಿಜನ್ ಮಂತ್ರಿ ಮಾಡಿದ್ರಿ ಅದು ಸರಿಯಾಗಿ ಸಿಗುತ್ತಿಲ್ಲ. ಹೆಣದ ಮೇಲೆ ಹಣ ಎತ್ತಬೇಡಿ ಎಂದು ಸರ್ಕಾರಕ್ಕೆ ಮತ್ತೆ ಚಾಟಿ ಬೀಸಿದರು.

ತಜ್ಞರ ಮಾತನ್ನು ಸರ್ಕಾರ ಎಂದು ಕೇಳಿಲ್ಲ. ಸಚಿವ ಸಂಪುಟದಲ್ಲಿ ನಿಮ್ಮ ಇಷ್ಟ ಬಂದ ರೀತಿ ತೀರ್ಮಾನ ಮಾಡಿದ್ದೀರಿ. ಈಗ ತಜ್ಞರ ಸಲಹೆ ಎಂದು ಹೇಳಿ ಲಾಕ್ ಡೌನ್ ಮುಂದುವರಿಸಬೇಡಿ. ಮತ್ತೆ ಲಾಕ್‍ಡೌನ್ ಮಾಡುವುದಾದರೆ ಪ್ರತಿಯೊಬ್ಬರಿಗೂ 10 ಸಾವಿರ ಕೊಟ್ಟು ನಂತರ ಮಾಡಿ. ನಿಮ್ಮ ತೆವಲಿಗಾಗಿ ಅಧಿಕಾರ ಉಳಿಸಿಕೊಳ್ಳಲು ಜನರನ್ನು ಬಲಿ ಕೊಡಬೇಡಿ ಎಂದು ವಿಶ್ವನಾಥ್ ಹೇಳಿದ್ದಾರೆ.

ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದ ಬಗ್ಗೆಯೂ ಸರ್ಕಾರಕ್ಕೆ ಚಾಟಿ ಬೀಸಿದ ವಿಶ್ವನಾಥ್, ನಾಳೆ ಸಚಿವ ಸಂಪುಟ ಸಭೆ ಇದೆ. ಭೂಮಿ ಪರಭಾರೆ ತೀರ್ಮಾನ ಧೃಡಿಕರಣಕ್ಕೆ ಬರುತ್ತದೆ. ಅದನ್ನು ಧೃಡಿಕರಣ ಮಾಡಬಾರದು. ಯಡಿಯೂರಪ್ಪ ಇದೇ ವಿಚಾರದಲ್ಲಿ ಅಹೋರಾತ್ರಿ ಹೋರಾಟ ಮಾಡಿದ್ದರು. ಈಗ ಇವರೇ ಭೂಮಿ ಕೊಡಲು ಹೊರಟ್ಟಿದ್ದಾರೆ. ಇಂತಹ ಸರ್ಕಾರ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಎಂದರು.

Comments

Leave a Reply

Your email address will not be published. Required fields are marked *