ಆ.15ರಂದು ಕೊರೊನಾ ವಾರಿಯರ್ಸ್‍ಗೆ ವಿಶೇಷ ಗೌರವ

– ಈ ಬಾರಿ ವಿದ್ಯಾರ್ಥಿಗಳ ಪೆರೇಡ್ ಇಲ್ಲ

ನವದೆಹಲಿ: ಮಹಾಮಾರಿ ಕೋವಿಡ್-19 ವಿರುದ್ಧ ಮೊದಲ ಸಾಲಿನಲ್ಲಿ ನಿಂತು ಹೋರಾಟ ನಡೆಸಿದ್ದ ಕೊರೊನಾ ವಾರಿಯರ್ಸ್‍ಗೆ ಈ ಬಾರಿಯ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಭಾಗವಹಿಸಲು ಅಹ್ವಾನ ನೀಡಲಾಗಿದ್ದು, ಆ ಮೂಲಕ ವೈದ್ಯರು, ಪೌರಕಾರ್ಮಿಕರು, ಪೊಲೀಸರು, ಇತರ ಅಧಿಕಾರಿಗಳಿಗೆ ವಿಶೇಷ ಗೌರವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ವಿಶೇಷ ಸೇವೆ ಮಾಡಿದ್ದ ವಾರಿಯರ್ಸ್‍ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಕೇಂದ್ರ ಸೂಚನೆ ನೀಡಿದೆ. ಅಲ್ಲದೇ ಕೊರೊನಾದಿಂದ ಗುಣಮುಖರಾದವರಿಗೂ ವಿಶೇಷ ಆಹ್ವಾನ ನೀಡುವಂತೆ ತಿಳಿಸಲಾಗಿದೆ.

ಕೊರೊನಾ ಕಾರಣದಿಂದ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಗೆ ಕೇಂದ್ರ ಸರ್ಕಾರ ಮಾರ್ಗದರ್ಶನಗಳನ್ನು ಬಿಡುಗಡೆ ಮಾಡಿದೆ. ರಾಜ್ಯಗಳ ರಾಜಧಾನಿಗಳಲ್ಲಿ ಬೆಳಗ್ಗೆ 9 ಗಂಟೆಗೆ ಸಮಾರಂಭ ನಡೆಸಲು ಸೂಚಿಸಲಾಗಿದೆ. ವೈರಸ್ ಕಾರಣದಿಂದ ಭಾರೀ ಸಂಖ್ಯೆಯಲ್ಲಿ ಜನರನ್ನು ಸಮಾರಂಭಕ್ಕೆ ಆಹ್ವಾನ ನೀಡಬಾರದು. ಭಾರೀ ಸಂಖ್ಯೆಯಲ್ಲಿ ಜನರು ಸೇರುವುದನ್ನು ತಡೆಯುವಂತೆ ಸೂಚನೆ ನೀಡಲಾಗಿದೆ. ಉಳಿದಂತೆ ಕಾರ್ಯಕ್ರಮದಲ್ಲಿ ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳು ಇದೇ ನಿಯಮಗಳನ್ನು ಪಾಲನೆ ಮಾಡಲು ಸೂಚಿಸಲಾಗಿದೆ. ಉಳಿದಂತೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಿರ್ಧಾರ ಕೈಗೊಳ್ಳಲು ಗವರ್ನರ್ ಗಳಿಗೆ ಅವಕಾಶ ನೀಡಲಾಗಿದೆ. ಈ ಹಿಂದೆಯೇ ಕೊರೊನಾ ಯೋಧರಿಗೆ ಭಾರತ ಮೂರು ಸೇನೆಗಳು ಗೌರವ ಸೂಚಿಸಿ ವಾರಿಯರ್ಸ್ ಮೇಲೆ ಹೂ ಮಳೆ ಸುರಿಸಿತ್ತು. ನೇವಿ ಯುದ್ಧ ನೌಕೆಗಳ ಮೇಲೆ ದೀಪಗಳನ್ನು ಬೆಳಗಿಸಿ ಗೌರವ ಸೂಚಿಸಿತ್ತು.

Comments

Leave a Reply

Your email address will not be published. Required fields are marked *