ಆಸ್ಪತ್ರೆಯಲ್ಲಿದ್ರೂ ಸಿಎಂ ಉತ್ತಮ ಕೆಲಸ ಮಾಡ್ತಿದ್ದಾರೆ: ಸುಧಾಕರ್

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿದ್ರೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಕೊರೊನಾ ನಿಗ್ರಹ, ಪ್ರವಾಹ ಪರಿಸ್ಥಿತಿಯನ್ನ ಸಮರ್ಪಕವಾಗಿ ಎದುರಿಸಲಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾದ ನಾಗಲೋಟ ಮುಂದುವರಿಯುತ್ತಿದೆ. ಅದೇ ರೀತಿ ಹೆಚ್ಚಿನ ಜನರ ಸಹ ಗುಣಮುಖರಾಗ್ತಿದ್ದಾರೆ. ಇದರ ಜೊತೆ ಜೊತೆಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಧಿಕ ಮಳೆ ಕೂಡ ಆಗ್ತಿದೆ. ಇದರ ಎಲ್ಲಾ ಹೊಣೆಗಾರಿಕೆಯನ್ನು ಸರ್ಕಾರ ಸಮರ್ಥವಾಗಿ ಮಾಡುತ್ತಿದೆ ಎಂದರು.

ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ರೂ ಕೂಡ ಅಲ್ಲಿಂದಲೇ ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಕಂದಾಯ ಸಚಿವ ಅಶೋಕ್ ಕೆಲ ಜಿಲ್ಲೆಗಳಿಗೆ ಇಂದಿನಿಂದ ಭೇಟಿ ಮಾಡ್ತಿದ್ದಾರೆ. ಸಿಎಂ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಮಗ್ರವಾದ ಮಾಹಿತಿ ಕಲೆಹಾಕುವುದರ ಸ್ಪಷ್ಟ ಸೂಚನೆಗಳನ್ನು ಕೊಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಪತ್ತಿಗೆ ಒಳಗಾಗುವ ಜನರನ್ನು ಸ್ಥಳಾಂತರ ಮಾಡುವ ಕಾಯಕ ಮಾಡಲಾಗುವುದು. ಹಾಗಾಗಿ ಸರ್ಕಾರ ಅಭಿವೃದ್ಧಿ ಸೇರಿದಂತೆ ಕೋರೋನಾ ನಿಗ್ರಹ ಸೇರಿದಂತೆ ಪ್ರವಾಹ ಪರಿಸ್ಥಿತಿಯನ್ನ ಸಮರ್ಪಕವಾಗಿ ನಿಭಾಯಿಸಲಿದೆ ಎಂದು ತಿಳಿಸಿದರು.

ಸಿಎಂ ಅವರು ದೈಹಿಕವಾಗಿ ಇರಬೇಕು ಅಂತಿಲ್ಲ. ಆಸ್ಪತ್ರೆಯಲ್ಲಿದ್ರೂ ಮಾನಸಿಕವಾಗಿ ಅವರ ಆದೇಶ ಅತಿ ಮುಖ್ಯ. ಅವರ ಏನು ಸೂಚನೆ ಕೊಡಬೇಕಾಗಿತ್ತೋ ಅದನ್ನು ಆಸ್ಪತ್ರೆಯಿಂದಲೇ ಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿದ್ರೂ ಸಿಎಂ ಯಾವ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದ್ದಾರೆ ಅಂತ ಜನ ಗಮನಿಸಬೇಕು ಅಂತ ಮನವಿ ಮಾಡಿಕೊಂಡರು.

Comments

Leave a Reply

Your email address will not be published. Required fields are marked *