ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ನಾನ್ ಕೋವಿಡ್ ರೋಗಿಗಳ ಪರದಾಟ

ದಾವಣಗೆರೆ: ಕೊರೊನಾ ರೋಗಿಗಳಿಗೆ ಅಷ್ಟೇ ಅಲ್ಲ ಈಗ ನಾನ್ ಕೋವಿಡ್ ರೋಗಿಗಳಿಗೂ ಚಿಕಿತ್ಸೆಗೆ ಸಮಸ್ಯೆಯಾಗಿದೆ. ರೋಗಿಯೊಬ್ಬರನ್ನು ನಾಲ್ಕೈದು ಆಸ್ಪತ್ರೆಗಳಿಗೆ ಸುತ್ತಾಡಿ ಕೊನೆಗೆ ಚಿಕಿತ್ಸೆ ಸಿಗದೆ ಮನೆಗೆ ವಾಪಸ್ಸು ಕರೆದುಕೊಂಡು ಹೋದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ, ಹರಪನಹಳ್ಳಿ ತಾಲೂಕಿನ ಕೋಡಿಯಾಲ ಗ್ರಾಮದ ನಿವಾಸಿ ವೃದ್ಧೆ ಅನುಸೂಯಮ್ಮ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅನುಸೂಯಮ್ಮ ಅವರನ್ನು ಚಿಕಿತ್ಸೆಗೆಂದು ದಾವಣಗೆರೆ ನಗರದ ಜಿಲ್ಲಾಸ್ಪತ್ರೆಗೆ ಕರೆತರಳಾಗಿತ್ತು. ಆದರೆ ಆಸ್ಪತ್ರೆಗೆ ಬರುತ್ತಿದ್ದಂತೆ, ಇಲ್ಲಿ ಬೆಡ್ ಖಾಲಿ ಇಲ್ಲ ಇದು ಕೋವಿಡ್ ಆಸ್ಪತ್ರೆಯಾಗಿದ್ದು, ನಾನ್ ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಇಲ್ಲಿಂದ ರೆಫರೆನ್ಸ್ ಲೆಟರ್ ಪಡೆದುಕೊಂಡು ಹೋಗಿ ಎಂದು ಜಿಲ್ಲಾಸ್ಪತ್ರೆಯ ಸಿಬ್ಬಂದಿ ವೃದ್ದೆಯ ಕುಟುಂಬಸ್ಥರಿಗೆ ತಿಳಿಸಿದರು.

ವೈದ್ಯರ ಮಾಹಿತಿ ಆಧರಿಸಿ ಅನುಸೂಯಮ್ಮ ಅವರನ್ನು ಪಕ್ಕದ ಖಾಸಗಿ ಆಸ್ಪತ್ರೆಗೆ ಕರೆ ತಂದರು. ಆದರೆ ಅಲ್ಲಿ ಕೂಡ ಬೆಡ್ ಸಿಗದೆ ಹೈರಾಣಾದರು. ಬಳಿಕ ಬೆಡ್‍ಗಾಗಿ ಸುತ್ತಾಟ ನಡೆಸಿದ ಅನುಸೂಯಮ್ಮ ಅವರ ಸಂಬಂಧಿಕರು, ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರು ಕೂಡ ಆಸ್ಪತ್ರೆ ಸಿಬ್ಬಂದಿ ದಾಖಲು ಮಾಡಿಕೊಳ್ಳದೆ ಇರುವುದುದನ್ನು ಕಂಡು ಮಾಧ್ಯಮದ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆಯಿಂದ ರೆಫರೆನ್ಸ್ ಲೆಟರ್ ಇದ್ದರೂ ಅಡ್ಮಿಷನ್ ಮಾಡಿಸಿಕೊಳ್ಳದ ಖಾಸಗಿ ಆಸ್ಪತ್ರೆಗಳು, 20 ಸಾವಿರ ಮುಂಗಡ ಹಣ ಕಟ್ಟಿ ಆಗ ಅಡ್ಮಿಷನ್ ಮಾಡಿಕೊಳ್ಳುತ್ತೇವೆ ಎಂದು ಖಾಸಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದಾಗ ಹಣ ಕಟ್ಟಲಾಗದೆ ಕುಟುಂಬದ ಸದಸ್ಯರು ರೋಗಿಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಜಿಲ್ಲಾಧಿಕಾರಿಗಳು ಎಲ್ಲಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತದೆ ಎಂದು ಹೇಳುತ್ತಿದ್ದಾರೆ ವಿನಃ ವಾಸ್ತವವಾಗಿ ನಡೆಯುತ್ತಿರುವುದೇ ಬೇರೆ. ಹಾಗಾಗಿ ಇನ್ನಾದರೂ ಜಿಲ್ಲಾಧಿಕಾರಿಗಳು ಖಾಸಗಿ ಆಸ್ಪತ್ರೆಯ ಮೇಲೆ ಕಡಿವಾಣ ಹಾಕಬೇಕು. ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *