ಆರ್‌ಸಿಬಿ ತಂಡ ಸೇರಿಕೊಂಡ ಕೊಹ್ಲಿ, ಎಬಿಡಿ

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗಾಗಿ ತಮ್ಮ ತಂಡವನ್ನು ಚೆನ್ನೈನಲ್ಲಿ ಕೂಡಿಕೊಂಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಅಭ್ಯಾಸ ಆರಂಭಿಸಿದ್ದು, ಕೂಟದ ಮೊದಲ ಪಂದ್ಯದಲ್ಲೇ ಕಳೆದ ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಏಪ್ರಿಲ್ 9 ರಂದು ಎದುರಿಸಲಿದೆ.

ಕ್ಯಾಪ್ಟನ್ ಕೊಹ್ಲಿ ತಂಡಕ್ಕೆ ಬರುತ್ತಿದ್ದಂತೆ ಟ್ವೀಟ್ ಮಾಡುವ ಮೂಲಕ ಆರ್‌ಸಿಬಿ ತಂಡ ಕೊಹ್ಲಿಯನ್ನು ಚೆನ್ನೈನಲ್ಲಿ ಸ್ವಾಗತಿಸಿದೆ. ಕೊಹ್ಲಿಗಿಂತ ಮುಂಚಿತವಾಗಿ ಆರ್‌ಸಿಬಿಯ ಇನ್ನೋರ್ವ ಬ್ಯಾಟ್ಸ್‌ಮ್ಯಾನ್ ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್ ತಂಡ ಸೇರಿಕೊಂಡಿದ್ದರು. ಐಪಿಎಲ್‍ಗೆ ಇನ್ನು ಕೇವಲ 8 ದಿನಗಳು ಬಾಕಿ ಉಳಿಸಿದ್ದು ಎಲ್ಲಾ ತಂಡದ ಆಟಗಾರರು ತಂಡದೊಂದಿಗೆ ಬಯೋಬಬಲ್ ಅಡಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಆರ್‌ಸಿಬಿ ತಂಡದಲ್ಲಿ ಘಟಾನುಘಟಿ ಅಟಗಾರರ ದಂಡೇ ಇದ್ದರೂ ಕೂಡ ಕಳೆದ 13 ಸೀಸನ್‍ಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿದೆ. ಆದರೆ ಈ ಬಾರಿ ತಂಡಕ್ಕೆ ಟಿ20 ಕ್ರಿಕೆಟ್‍ನ ಸ್ಪೆಷಲಿಸ್ಟ್  ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡಿರುವ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಹರಾಜಿನಲ್ಲಿ ಖರೀದಿಸಿರುವ ಆರ್‌ಸಿಬಿ ಇವರ ಮೇಲೆ ಭಾರೀ ನಿರೀಕ್ಷೆ ಇರಿಸಿದೆ. ಈ ಮೂಲಕ ಈ ಬಾರಿ ಪ್ರಶಸ್ತಿಗೆ ಮುತ್ತಿಕ್ಕುವ ತವಕದಲ್ಲಿದೆ.

14ನೇ ಆವೃತ್ತಿಯ ಐಪಿಎಲ್ ಪಂದ್ಯಾಟಗಳು ಏಪ್ರಿಲ್ 9 ರಿಂದ ಮೇ 30ರ ವರೆಗೆ ಬೆಂಗಳೂರು, ಚೆನ್ನೈ, ದೆಹಲಿ, ಅಹಮದಾಬಾದ್ ಸೇರಿದಂತೆ 6 ನಗರಗಳಲ್ಲಿ ನಡೆಯಲಿದೆ.

Comments

Leave a Reply

Your email address will not be published. Required fields are marked *