ಆರ್‌ಟಿಪಿಎಸ್‌ನಲ್ಲಿ ಅಗ್ನಿ ಅವಘಡ- 60 ಲಕ್ಷ ರೂ.ಮೌಲ್ಯದ ವಸ್ತುಗಳು ಭಸ್ಮ

ರಾಯಚೂರು: ಜಿಲ್ಲೆಯ ಶಕ್ತಿನಗರದಲ್ಲಿರುವ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್ ನ 4ನೇ ಘಟಕದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ.

ಮಂಗಳವಾರ ರಾತ್ರಿ ವೇಳೆ ಆರ್‌ಟಿಪಿಎಸ್ ನಲ್ಲಿ ವಿದ್ಯುತ್ ಘಟಕ ಆರಂಭಿಸುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ನಾಲ್ಕು ತಿಂಗಳಿಂದ ವಿದ್ಯುತ್ ಕೇಂದ್ರ ಕಾರ್ಯಸ್ಥಗಿತಗೊಂಡಿದ್ದರಿಂದ ಘಟಕ ಆರಂಭಿಸುವ ವೇಳೆ ತಾಂತ್ರಿಕ ಸಮಸ್ಯೆಯಿಂದ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕೆನ್ನಾಲಿಗೆ ವಿದ್ಯುತ್ ಪರಿವರ್ತಕ ಸೇರಿದಂತೆ ಸುಮಾರು 60 ಲಕ್ಷ ರೂ.ಮೌಲ್ಯದ ವಸ್ತುಗಳು ಸುಟ್ಟು ಹಾಳಾಗಿವೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ವಿದ್ಯುತ್ ಬೇಡಿಕೆ ಕುಸಿತದಿಂದ ವಿದ್ಯುತ್ ಕೇಂದ್ರದ ಎಲ್ಲಾ 8 ಘಟಕಗಳನ್ನ ಸ್ಥಗಿತಗೊಳಿಸಲಾಗಿತ್ತು. ಮೊದಲ ಬಾರಿಗೆ ಸುಮಾರು ನಾಲ್ಕು ತಿಂಗಳ ಕಾಲ ಯಾವುದೇ ಘಟಕವನ್ನು ಆರಂಭಿಸದೆ ಆರ್‌ಟಿಪಿಎಸ್ ಸಂಪೂರ್ಣ ಸ್ಥಬ್ದವಾಗಿತ್ತು.

ಇತ್ತೀಚೆಗೆ ಒಂದನೇ ಘಟಕ ಆರಂಭಿಸಿ ವಿದ್ಯುತ್ ಉತ್ಪಾದನೆ ಆರಂಭವಾಗಿತ್ತು. ಈಗ ನಾಲ್ಕನೇ ಘಟಕದಲ್ಲಿ ವಿದ್ಯುತ್ ಆರಂಭಿಸಲು ಮುಂದಾದಾಗ ಬೆಂಕಿ ಅವಘಡ ಸಂಭವಿಸಿದೆ.

Comments

Leave a Reply

Your email address will not be published. Required fields are marked *