ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ವಿರುದ್ಧ ಎಫ್‍ಐಆರ್ ದಾಖಲು

ಪಾಟ್ನಾ: ಬಿಹಾರದ ಸರ್ಕಾರ ವಿರುದ್ಧ ಪ್ರತಿಭಟನೆ ವೇಳೆ ಪೊಲೀಸರೊಂದಿಗೆ ನಡೆಸಿದ ಘರ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಮತ್ತು ಇತರ ಕೆಲವು ಮಂತ್ರಿಗಳು ಮತ್ತು ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಬಿಹಾರದ ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ನಿತೇಶ್ ಕುಮಾರ್ ಸರ್ಕಾರ ನಿರುದ್ಯೋಗ, ಕಾನೂನು ಸುವ್ಯವಸ್ಥೆ ಮತ್ತು ಹಣದುಬ್ಬರದ ಏರಿಳಿತಗಳನ್ನು ಸರಿಹೊಂದಿಸಿಕೊಂಡು ಹೋಗಲು ವಿಫಲವಾಗಿದೆ ಎಂದು ಆರ್‌ಜೆಡಿ ಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ ಪೊಲೀಸರು ಪಾಟ್ನಾದ ಡಾಕ್ ಬಂಗ್ಲೋ ಕ್ರಾಸಿಂಗ್ ಬಳಿ ಪ್ರತಿಭಟನಾ ನಿರತರನ್ನು ತಡೆದಿದ್ದರು. ಈ ಸಂದರ್ಭ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿತ್ತು.

ಆರ್‌ಜೆಡಿ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರು. ಪ್ರತಿಭಟನಾ ನಿರತ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಪಟ್ಟು ಕೊನೆಗೆ ನೀರಿನ ಫಿರಂಗಿಯನ್ನು ಪ್ರಯೋಗಿಸಿದ್ದರು.

ಪ್ರತಿಭಟನೆ ವೇಳೆ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಮತ್ತು ಇತರ ಆರ್‌ಜೆಡಿ ಪಕ್ಷದ ಕಾರ್ಯಕರ್ತರು ಕರ್ತವ್ಯನಿರತ ಪೊಲೀಸರ ಮೇಲೆ ದಾಳಿ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿರುವ ಕಾರಣದಿಂದ ಎಫ್‍ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದ್ದು, ಆರ್‌ಜೆಡಿ ಪಕ್ಷದ ಶಾಮ್ ರಾಜಕ್, ಮಾಜಿ ಸಚಿವ ಅಬ್ದುಲ್ ಬರಿ ಸಿದ್ಧಿಕಿ, ಕೇಂದ್ರದ ಮಾಜಿ ಸಚಿವ ಕಾಂತಿ ಸಿಂಗ್ ಅವರ ಹೆಸರು ಕೂಡ ಎಫ್‍ಐಆರ್ ನಲ್ಲಿದೆ.

Comments

Leave a Reply

Your email address will not be published. Required fields are marked *