ಆರೋಗ್ಯ ಕಾಪಾಡಿಕೊಳ್ಳಿ ಅಂದ್ರೆ ನಾನು ಜನ ಸೇವಕ ಅಂತಿದ್ರು- ಗೆಳೆಯನ ನೆನೆದು ಪ್ರಭಾಕರ್ ಕೋರೆ ಕಂಬನಿ

ಬೆಳಗಾವಿ: ಕೇಂದ್ರ ಸಚಿವ ಸುರೇಶ್ ಅಂಗಡಿ ನಾನು ಉತ್ತಮ ಸ್ನೇಹಿತರಾಗಿದ್ದೆವು, ಕೊರೊನಾ ಬಳಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳುತ್ತಿದ್ದೆ. ಆದರೆ ಅವರು ನಾನು ಜನರ ಸೇವೆ ಮಾಡಲು ಬಂದವನು ಎನ್ನುತ್ತಿದ್ದರು ಎಂದು ಸುರೇಶ್ ಅಂಗಡಿ ಅಗಲಿಕೆ ಕುರಿತು ರಾಜ್ಯಸಭಾ ಸದಸ್ಯ, ಅವರ ಆಪ್ತ ಸ್ನೇಹಿತ ಪ್ರಭಾಕರ್ ಕೋರೆ ಕಂಬನಿ ಮಿಡಿದಿದ್ದಾರೆ.

ಸುರೇಶ್ ಅಂಗಡಿಯವರ ಬೆಳಗಾವಿ ನಿವಾಸಕ್ಕೆ ದಂಪತಿ ಸಮೇತ ಭೇಟಿ ನೀಡಿ ಅವರ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಸುರೇಶ್ ಅಂಗಡಿ ನೆನೆದು ಕಣ್ಣೀರು ಹಾಕಿದ್ದಾರೆ. ಸುರೇಶ್ ಅಂಗಡಿಯವರ ಆಕಸ್ಮಿಕ ನಿಧನದಿಂದ ದೇಶಕ್ಕೆ, ರಾಜ್ಯಕ್ಕೆ ದೊಡ್ಡ ಹಾನಿಯಾಗಿದೆ. ನಿಧನದ ನಂತರ ಅವರ ವ್ಯಕಿತ್ವ ಎಲ್ಲರಿಗೂ ಗೊತ್ತಾಗುತ್ತಿದೆ. ಅವರು ರೈಲ್ವೆ ಸಚಿವರಾದ ನಂತರ ಸಾಕಷ್ಟು ರೈಲುಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಸ್ಮರಿಸಿದರು.

ಅವರ 90 ವರ್ಷದ ತಾಯಿಯನ್ನು ನೋಡಿದರೆ ದುಃಖವಾಗುತ್ತದೆ. ಸುರೇಶ್ ಅಂಗಡಿ ಸೆ.11ರಂದು ಆಸ್ಪತ್ರೆಗೆ ದಾಖಲಾದ ನಂತರ 12 ರಂದು ಕರೆ ಮಾಡಿ ಅವರ ಜೊತೆ ಮಾತನಾಡಿದ್ದೆ. ಅವರು ನಿನ್ನೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ನಿನ್ನೆ ಹಾರ್ಟ್‍ನಲ್ಲಿ ಬ್ಲಾಕ್ ಆದ ಪರಿಣಾಮ ನಮ್ಮನ್ನ ಅಗಲಿದ್ದಾರೆ. ನಾನು ಅವರ ಮನೆಯಲ್ಲಿ ಮೂರು ತಿಂಗಳು ಇದ್ದೆ. ಪೂಜೆ ಪುನಸ್ಕಾರ ಮಾಡುತ್ತಿದ್ದರು. ನಮ್ಮ ದುರ್ದೈವ, ಬಹು ದೊಡ್ಡ ಅನ್ಯಾಯವಾಗಿದೆ ಎಂದು ಭಾವುಕರಾದರು.

ನಾನು ಮೊದಲು ಬೇರೆ ಪಕ್ಷದಲ್ಲಿ ಇದ್ದರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಇತ್ತೀಚೆಗೆ ಅವರಿಗೆ ಮಾಸ್ಕ್ ಹಾಕಿಕೊಂಡು, ಆರೋಗ್ಯ ಕಾಪಾಡಿಕೊಳ್ಳುವಂತೆ ಹೇಳಿದ್ದೆ. ಆಗ ಉತ್ತರಿಸಿ, ನಾನು ಜನರ ಸೇವೆ ಮಾಡಲು ಬಂದವನು ಎಂದು ಹೇಳಿದ್ದರು. ಕೊರೊನಾ ಈಗ ಹಳ್ಳಿ ಹಳ್ಳಿಗೂ ತಲುಪಿದೆ. ಜನ ಎಚ್ಚರದಿಂದ ಇರಬೇಕು, ಜನ ಜಾಗೃತರಾದರೆ ಮಾತ್ರ ಕೊರೊನಾ ಹರಡುವುದನ್ನು ತಡೆಗಟ್ಟಬಹುದು ಎಂದು ಅವರು ಸಲಹೆ ನೀಡಿದರು.

Comments

Leave a Reply

Your email address will not be published. Required fields are marked *