ಆರೋಗ್ಯ ಇಲಾಖೆ ಎಡವಟ್ಟು- ವರದಿ ಬರುವ ಮುನ್ನವೇ ಸೋಂಕಿತ ಮನೆಗೆ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಆರೋಗ್ಯ ಅಧಿಕಾರಿಗಳು ಮಾಡಿರೋ ಎಡವಟ್ಟಿಗೆ ಇಡೀ ಶೃಂಗೇರಿ ತಾಲೂಕಿನಾದ್ಯಂತ ಆತಂಕ ಹೆಚ್ಚಾಗಿದೆ.

ಮೇ 17ರಂದು ದೆಹಲಿಯಿಂದ ಬಂದು ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಯ ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಅಧಿಕಾರಿಗಳು ಆತನನ್ನ ಮನೆಗೆ ಕಳಿಸಿ ಮಹಾ ಎಡವಟ್ಟು ಮಾಡಿದ್ದಾರೆ. ಇದರಿಂದ ಇಡೀ ಶೃಂಗೇರಿ ತಾಲೂಕಿನಾದ್ಯಂತ ಆತಂಕ ಹೆಚ್ಚಾಗಿದೆ.

ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿಗೆ ಕೊರೊನಾ ನೆಗೆಟಿವ್ ಎಂದು ಅಧಿಕಾರಿಗಳು ಆತನನ್ನ ಮನೆಗೆ ಕಳುಹಿಸಿದ್ದರು. ಆದರೆ ಗುರುವಾರದ ಹೆಲ್ತ್ ಬುಲೆಟಿನ್‍ನಲ್ಲಿ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದ 37 ವರ್ಷದ ವ್ಯಕ್ತಿಗೆ ಸೋಂಕಿರುವುದು ಸಾಬೀತಾಗಿದೆ.

ಮೇ 17ರಂದು ದೆಹಲಿಯಿಂದ ಬಂದಿರುವ ಶೃಂಗೇರಿ ಮೂಲದ ವ್ಯಕ್ತಿ ಅಂದಿನಿಂದ ಕೊಪ್ಪದ ಕ್ವಾರಂಟೈನ್ ಘಟಕದಲ್ಲಿದ್ದರು. ಆದರೆ ಇದೀಗ ಅಧಿಕಾರಿಗಳು ವ್ಯಕ್ತಿಯ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿದ್ದರಿಂದ ಇಡೀ ಗ್ರಾಮದಲ್ಲಿ ಆತಂಕ ಶುರುವಾಗಿದೆ. ಜೊತೆಗೆ ವ್ಯಕ್ತಿಯ ಮನೆಯವರು, ಸಂಬಂಧಿಕರು ಹಾಗೂ ಅಕ್ಕಪಕ್ಕದ ಜನರಲ್ಲಿ ಆತಂಕ ಇಮ್ಮಡಿಗೊಂಡಿದೆ.

ಯಾವಾಗ ವ್ಯಕ್ತಿಗೆ ಕೊರೊನಾ ಸೋಂಕಿರೋದು ದೃಢವಾಯ್ತೋ ಶೃಂಗೇರಿ ತಹಶೀಲ್ದಾರ್ ಹಾಗೂ ತಾಲೂಕು ವೈದ್ಯಾಧಿಕಾರಿ ಸೇರಿದಂತೆ ಅಧಿಕಾರಿ ವರ್ಗ ಬೇಗೂರಿಗೆ ತೆರಳಿ ಕೊರೊನಾ ಸೋಂಕಿತ ವ್ಯಕ್ತಿಯ ಪ್ರಥಮ ಹಾಗೂ ದ್ವೀತಿಯ ಸಂಪರ್ಕ ಹೊಂದಿದವರಿಗಾಗಿ ಹುಡುಕಾಟದಲ್ಲಿದ್ದಾರೆ. ಆರೋಗ್ಯ ಅಧಿಕಾರಿಗಳು ವರದಿ ಬರುವ ಮುನ್ನವೇ ಹೇಗೆ ಆತನನ್ನ ಮನೆಗೆ ಕಳುಹಿಸಿದ್ದಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕಾಫಿನಾಡ ಆರೋಗ್ಯ ಇಲಾಖೆ ವಿರುದ್ಧ ಈಗಾಗಲೇ ಜಿಲ್ಲೆಯ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದರೆ ಸೋಂಕೇ ತಗುಲದ ಮೂಡಿಗೆರೆ ವೈದ್ಯ ಹಾಗೂ ತರೀಕೆರೆ ಗರ್ಭೀಣಿ ಸೋಂಕಿಲ್ಲದಿದ್ದರೂ ಸೋಂಕು ತಗುಲಿದೆ ಎಂದು ಮಾಹಿತಿ ನೀಡಿ, ನಂತರ ಇಲ್ಲ ಅವರಿಗೆ ಪಾಸಿಟಿವ್ ಇಲ್ಲ ನೆಗೆಟಿವ್ ಎಂದು ಮಾಹಿತಿ ನೀಡಿದ್ದರಿಂದ ಜಿಲ್ಲೆಯ ಜನ ಆತಂಕದ ಸಂದರ್ಭದಲ್ಲೇ ಆರೋಗ್ಯ ಇಲಾಖೆ ಹುಡುಗಾಟ ಆಡುತ್ತಿದ್ಯಾ ಎಂದು ಅಸಮಾಧಾನ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *