ಆರೋಗ್ಯ ಇಲಾಖೆಯ ಸಲಹೆಯಂತೆಯೇ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗಿದೆ: ಸುರೇಶ್ ಕುಮಾರ್

ಬೆಂಗಳೂರು: ಆರೋಗ್ಯ ಇಲಾಖೆ ಸಲಹೆಯಂತೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಾಂಕ ಪ್ರಕಟ ಮಾಡಲಾಗಿದೆ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಇಲಾಖೆ ಜೊತೆ ಚರ್ಚೆ ಮಾಡಿಲ್ಲ ಎಂಬ ಸಚಿವ ಡಾ. ಸುಧಾಕರ್ ಹೇಳಿಕೆ ವಿಚಾರವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಸುರೇಶ್ ಕುಮಾರ್, ಆರೋಗ್ಯ ಇಲಾಖೆ ಸಲಹೆ ಪಡೆಯಲಾಗಿದೆ ಅಂತ ಸ್ಪಷ್ಟಪಡಿಸಿದರು.

ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಇಂದು ಸಭೆ ನಡೆಸಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ಪ್ರಮಾಣಿತ ಕಾರ್ಯಚರಣಾ ವಿಧಾನಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಅವರೂ ಸಹ, ಆರೋಗ್ಯ ಇಲಾಖೆಯ ಸಹಕಾರದ ಬಗ್ಗೆ ವಿಷದಪಡಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಅಲ್ಲದೇ ಇಂದು ನಡೆದ ಎರಡು ಗಂಟೆಗಳ ಸುದೀರ್ಘ ಜಿಲ್ಲಾಧಿಕಾರಿಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆಯುಕ್ತರು ಪಾಲ್ಗೊಂಡಿದ್ದಾರೆ. ಇಲಾಖೆಯು ನೀಡಿರುವ ಎಸ್.ಓ.ಪಿ ಅನುಸರಣೆಗೆ ಬೇಕಾದ ಸಿದ್ಧತೆಗಳ ಕುರಿತು ತಮ್ಮ ಸದಭಿಪ್ರಾಯವನ್ನು ಎಲ್ಲ ಜಿಲ್ಲಾಡಳಿತಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿಗಳನ್ನು ಇಂದು ಸಭೆಗೆ ಮುನ್ನ ಖುದ್ದಾಗಿ ಭೇಟಿ ಮಾಡಿ ಪರೀಕ್ಷಾ ದಿನಾಂಕ ಪ್ರಕಟಣೆಗೆ ಮೌಖಿಕ ಒಪ್ಪಿಗೆ ಪಡೆಯಲಾಗಿದೆ ಎಂದು ಸುರೇಶ್ ಕುಮಾರ್ ವಿವರಣೆ ನೀಡಿದ್ದಾರೆ. ಇದನ್ನೂ ಓದಿ:  ಜುಲೈ 19, 22ಕ್ಕೆ SSLC ಎಕ್ಸಾಂ ಫಿಕ್ಸ್ – 2 ದಿನದಲ್ಲಿ ಸರಳ ಪರೀಕ್ಷೆ, ಯಾರೂ ಫೇಲ್ ಇಲ್ಲ

ಆರೋಗ್ಯ ಇಲಾಖೆಯು ಸಿದ್ಧ ಪಡಿಸಿ ನೀಡಿರುವ ಪ್ರಮಾಣಿತ ಕಾರ್ಯಚರಣಾ ವಿಧಾನಗಳ ಆಧಾರದಲ್ಲಿ ಜುಲೈ ಮಾಹೆಯಲ್ಲಿ ನಿಗದಿತ ದಿನಾಂಕಗಳಂದು ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸುವ ವಿಶ್ವಾಸ ಇದೆ. ಸುರಕ್ಷಿತವಾಗಿ ನಡೆಯಲಿರುವ ಈ ಪರೀಕ್ಷೆಗಳು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯವೆನ್ನುವುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *