ಆನ್‍ಲೈನ್ ಕ್ಲಾಸ್ ಪ್ರಾಬ್ಲಂ- ಕುಗ್ರಾಮಗಳಿಗೆ ಸುರೇಶ್ ಕುಮಾರ್ ಭೇಟಿ

ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಶಾಲೆಗಳು ಆರಂಭಗೊಳ್ಳದ ಹಿನ್ನೆಲೆಯಲ್ಲಿ ಆನ್‍ಲೈನ್ ತರಗತಿ ಆರಂಭಗೊಂಡಿವೆ. ಆದರೆ ಜಿಲ್ಲೆಯ ಮಲೆನಾಡು ಭಾಗ ಹಾಗೂ ಕುಗ್ರಾಮದಲ್ಲಿ ಆನ್‍ಲೈನ್ ಕ್ಲಾಸ್ ಅಸಾಧ್ಯವೇ ಸರಿ. ಈ ಹಿನ್ನೆಲೆ ಮಕ್ಕಳ ಸಮಸ್ಯೆ ಆಲಿಸಲು ಸಚಿವ ಸುರೇಶ್ ಕುಮಾರ್ ಇಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

10ನೇ ತರಗತಿ ಓದುತ್ತಿರುವ ಮಕ್ಕಳ ಸಮಸ್ಯೆ ಆಲಿಸಲು ಸಚಿವ ಸುರೇಶ್ ಕುಮಾರ್ ಜಿಲ್ಲೆಯ ಕೊಪ್ಪ ತಾಲೂಕಿನ ಹೊರ್ಲೆ, ಮೆಣಸಿನ ಕೊಡಿಗೆ, ಕಿತ್ತಳೆಗೂಳಿ, ಅಮ್ಮಡ್ಲು ಹಾಗೂ ಹುಲುತಾಳು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ. ಹೊರ್ಲೆ ಗ್ರಾಮದ 10ನೇ ತರಗತಿ ವಿದ್ಯಾರ್ಥಿ ಆದರ್ಶ್ ಆನ್‍ಲೈನ್ ಶಿಕ್ಷಣದ ಬಗ್ಗೆ ತಮಗಿರುವ ಸಮಸ್ಯೆಗಳನ್ನ ಸರ್ಕಾರಕ್ಕೆ ತಲುಪಿಸಲು ಯತ್ನಿಸಿದ್ದ. ಆತನ ನೋವಿನ ನುಡಿಯ ಆಡಿಯೋ ತುಣುಕುಗಳು ಸಚಿವರ ಗಮನಕ್ಕೆ ಬಂದಿತ್ತು.

ಕೂಡಲೇ ಸಚಿವರು ಆತನ ಜೊತೆ ಮಾತನಾಡಲು ಯತ್ನಿಸಿದ್ದಾರೆ. ಆದರೆ ಕೊಪ್ಪ ನಗರದಿಂದ ಸುಮಾರು 60 ಕಿ.ಮೀ.ದೂರದ ಕುಗ್ರಾಮದಲ್ಲಿರುವ ಬಾಲಕ ಆದರ್ಶ್ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲ. ಯಾಕೆಂದರೆ ಅಲ್ಲಿ ಕರೆಂಟ್ ಇಲ್ಲ. ಮೊಬೈಲ್ ನೆಟ್ವರ್ಕ್ ಕೂಡ ಇಲ್ಲ. ಫೋನ್ ಬಂದಾಗ ನೆಟ್‍ವರ್ಕ್ ಇರುವ ಜಾಗಕ್ಕೆ ಹೋಗಿ ಮಾತನಾಡಬೇಕು. ನೆಟ್‍ವರ್ಕ್ ಸಿಕ್ಕರೆ ಸಿಗಬಹುದು, ಇಲ್ಲವಾದರೆ ಇಲ್ಲ. ಕೂಡಲೇ ಸಚಿವರು ಬಿಇಓ ಜೊತೆ ಕೂಡ ಮಾತನಾಡಿದ್ದಾರೆ. ಹಾಗಾಗಿ ಸಚಿವರು ಇಂದು ಮಲೆನಾಡ ಕುಗ್ರಾಮಗಳಿಗೆ ಭೇಟಿ ನೀಡಿ, ಮಕ್ಕಳ ನೋವನ್ನ ಆಲಿಸಲು ಮುಂದಾಗಿದ್ದಾರೆ.

10ನೇ ತರಗತಿ ವಿದ್ಯಾರ್ಥಿ ಆದರ್ಶ್‍ಗೆ ಇರುವಂತೆ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಸಾಕಷ್ಟು ಕುಗ್ರಾಮಗಳಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಈ ಭಾಗದಲ್ಲಿ ಆನ್‍ಲೈನ್ ಶಿಕ್ಷಣ ಅಸಾಧ್ಯವೇ ಸರಿ. ಎಷ್ಟೋ ಕುಗ್ರಾಮಗಳ ಜನ ಕೀ ಪ್ಯಾಡ್ ಮೊಬೈಲ್ ಇಟ್ಟುಕೊಂಡಿದ್ದಾರೆ. ಹಾಗಾಗಿ ಜಿಲ್ಲೆಗೆ ಸಚಿವರು ಬರುವುದರಿಂದ ಕುಗ್ರಾಮದ ಜನ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂದು ಆಶಾಭಾವನೆಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *