ಬಳ್ಳಾರಿ: ಮಾಜಿ ಸಚಿವ ಆನಂದ್ ಸಿಂಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.
ಆನಂದ್ ಸಿಂಗ್ ಅವರ ಸಾವಿರಾರು ಅಭಿಮಾನಿಗಳು ಈ ಅಭಿಯಾನ ಆರಂಭ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದ ಭಾರೀ ಸದ್ದು ಮಾಡುತ್ತಿದೆ. ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಂದಿ ಹಾಡಿದ್ದ ಆನಂದ್ ಸಿಂಗ್ ಅವರ ಬೇಡಿಕೆಯಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ ಅವರು ಜಿಲ್ಲಾ ವಿಭಜನೆ ಮಾಡಿ, ಆನಂದ್ ಸಿಂಗ್ ಅವರ ಬೇಡಿಕೆ ಈಡೇರಿಸಿದ್ದಾರೆ. ಆದರೆ ಈಗ ಆನಂದ್ ಸಿಂಗ್ ಅವರ ಅಭಿಮಾನಿಗಳು ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಇಟ್ಟು ಅಭಿಯಾನ ಆರಂಭ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಇಬ್ಭಾಗ ಮಾಡಿದ ಸಿಟ್ಟು ಜನರಲ್ಲಿದೆ, ನನಗೆ ಸಚಿವ ಸ್ಥಾನ ಕೊಡಿ: ಸೋಮಶೇಖರ ರೆಡ್ಡಿ

ಇತ್ತ ಮಾಜಿ ಸಚಿವ ಶ್ರೀರಾಮುಲು ಅವರು ಸಹ ಬಹುದಿನಗಳಿಂದ ಡಿಸಿಎಂ ಕನಸು ಕಂಡಿದ್ದಾರೆ. ಈಗಾಗಲೇ ಅವರ ಹೆಸರು ಅಂತಿಮವಾಗಿದೆ ಎಂದು ತಿಳಿದು ಬಳ್ಳಾರಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು. ಆದರೆ ಕೊನೆಯಲ್ಲಿ ಅವರ ಹೆಸರು ಕೈ ಬಿಡಲಾಗಿದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಹೀಗಾಗಿ ಮಾಜಿ ಸಚಿವ ಆನಂದ್ ಸಿಂಗ್ ಅವರ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ನಡೆಸುತ್ತಿರುವ ಈ ಅಭಿಯಾನ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದೇ ವಿಷಯವಾಗಿ ಕಳೆದ ಎರಡು ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ರಾಮುಲು, ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧ. ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿದ್ದರು. ಇದನ್ನೂ ಓದಿ: ನಾನು ಬಿಜೆಪಿ ಶಿಸ್ತಿನ ಸಿಪಾಯಿ, ಡಿಸಿಎಂ ಸ್ಥಾನಕ್ಕೆ ಲಾಬಿ ಮಾಡಲ್ಲ: ರಾಮುಲು

Leave a Reply