ಆತಂಕ ಬೇಡ, ಆರೋಗ್ಯವಾಗಿದ್ದೇನೆ- ಆಸ್ಪತ್ರೆಯಿಂದ ಸಿಎಂ ವಿಡಿಯೋ ಸಂದೇಶ

– ಬೇಗ ಗುಣಮುಖನಾಗುತ್ತೇನೆಂದು ವೈದ್ಯರು ಹೇಳಿದ್ದಾರೆ
– ಸಿದ್ದರಾಮಯ್ಯ, ಎಚ್‍ಡಿಕೆ, ಎಚ್‍ಡಿಡಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ
– ಜೆ.ಪಿ,ನಡ್ಡಾ, ನಿರ್ಮಲಾ ಸೀತಾರಾಮನ್ ಸಹ ಕರೆ ಮಾಡಿದ್ದರು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆಸ್ಪತ್ರೆಗೆ ದಾಖಲಾದ ಬಳಿಕ ಮೊದಲ ವಿಡಿಯೋ ಸಂದೇಶ ಕಳುಹಿಸಿದ್ದು, ಯಾರಿಗೂ ಆತಂಕ ಬೇಡ, ಆರೋಗ್ಯವಾಗಿದ್ದೇನೆ. ಬೇಗ ಗುಣಮುಖನಾಗುತ್ತೇನೆಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಭಾನುವಾರ ರಾತ್ರಿ 8-9 ಗಂಟೆಗೆ ಕೊರೊನಾ ಪಾಸಿಟಿವ್ ಎಂದು ತಿಳಿಯಿತು. ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ವೈದ್ಯರು ಭಾನುವಾರ ರಾತ್ರಿ ಹಾಗೂ ಇಂದು ಬೆಳಗ್ಗೆ ಪರೀಕ್ಷೆ ಮಾಡಿ ಯಾವುದೇ ತೊಂದರೆ ಇಲ್ಲ ಬೇಗ ಗುಣಮುಖರಾಗಿ ಮನೆಗೆ ಹೋಗುತ್ತೀರಿ ಎಂದು ಹೇಳಿದ್ದಾರೆ ಎಂದು ವಿವರಿಸಿದ್ದಾರೆ.

ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಅನೇಕ ಮಠಾಧೀಶರು ಕರೆ ಮಾಡಿ ಆರೋಗ್ಯ ವಿಚಾರಿಸಿ, ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.

ಭಾನುವಾರದಿಂದಲೇ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಸರ್ಕಾರದ ಯಾವುದೇ ಕೆಲಸಗಳಿಗೆ ಅಡ್ಡಿಯಾಗಬಾರದೆಂದು ಸೂಚಿಸಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದಷ್ಟು ಬೇಗ ಗುಣಮುಖನಾಗಿ ಹೊರ ಬಂದು ಕರ್ತವ್ಯದಲ್ಲಿ ತೊಡಗುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಬೆಂಬಲ ಇರಲಿ. ನಾಡಿನ ಆರೂವರೆ ಕೋಟಿ ಜನರ ಆರೋಗ್ಯ ಮುಖ್ಯ. ಎಲ್ಲರೂ ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ. ಇದರಿಂದ ಮಾತ್ರ ಕೊರೊನಾದಿಂದ ತಪ್ಪಿಸಿಕೊಳ್ಳಲು ಸಾಧ್ಯ. ಇದನ್ನು ಎಲ್ಲರೂ ಎಚ್ಚರಿಕೆಯಿಂದ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *