ಆಟೋ ರಿಕ್ಷಾದಲ್ಲಿ ರಾಹುಲ್ ಗಾಂಧಿ ರೋಡ್ ಶೋ

ತಿರುವನಂತಪುರಂ: ಬಿಜೆಪಿ ಹಾಗೂ ಎನ್‍ಡಿಎ ಆಡಳಿತ ಸರ್ಕಾರದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಯನ್ನು ಎತ್ತಿ ತೋರಿಸುವ ಸಲುವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇರಳದ ಎರಡು ಪ್ರದೇಶಗಳಿಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದರು.

ಕೇರಳದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ನಡೆಸಲು ಏಪ್ರಿಲ್ 6 ಕೊನೆಯ ದಿನವಾಗಿದೆ. ಹೀಗಾಗಿ ನಿನ್ನೆ ಸಂಜೆ ತಿರುವನಂತಪುರಂ ನೆಮೊಮ್‍ನಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಬಳಿಕ ಆಟೋ ರಿಕ್ಷಾವನ್ನು ಕರೆಸಿ ಪ್ರಯಾಣಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದರು.

2016ರ ವಿಧಾನಸಭಾ ಚುನಾವಣೆ ವೇಳೆ ನೆಮೊಮ್‍ನಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಸಂಸದ ಕೆ ಮುರಳೀಧರನ್ ಬಿಜೆಪಿ ವಿರುದ್ಧ ಅತೀ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಜಯಗಳಿಸಿದ್ದರು. ಇದೀಗ ಈ ಕ್ಷೇತ್ರವು ಎಲ್‍ಡಿಎಫ್, ಯುಡಿಎಫ್ ಮತ್ತು ಬಿಜೆಪಿ ನಡುವೆ ತೀವ್ರ ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗಿದೆ.

ಭಾನುವಾರ ಸಭೆ ನಂತರ ರಾಹುಲ್ ಗಾಂಧಿ ಆಟೋ ರಿಕ್ಷಾದ ಮೂಲಕ ರೋಡ್ ಶೋ ನಡೆಸಿದರು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ. ಅಲ್ಲದೆ ಆಟೋ ಚಾಲಕ ತಮ್ಮ ಸಂಪಾದನೆಯೆಲ್ಲ ಇಂಧನಕ್ಕಾಗಿ ಖರ್ಚು ಮಾಡುವುದರಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಬಿಜೆಪಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಏರಿಸಿ, ಹಣವನ್ನು ತಮ್ಮ ಸ್ನೇಹಿತರಿಗೆ ನೀಡುತ್ತಿದೆ. ಹೀಗಿರುವಾಗ ಇಲ್ಲಿಗೆ ಬಂದು ನಿಮ್ಮ ಮತ ಕೇಳಲು ಅವರಿಗೆ ಎಷ್ಟು ಧೈರ್ಯ ಎಂದು ರಾಹುಲ್ ಕಿಡಿಕಾರಿದರು. ಬಳಿಕ ರಾಹುಲ್ ವಯನಾಡಿನ ಕಲ್ಪೆಟ್ಟದಲ್ಲಿರುವ ಹೆಲಿಪ್ಯಾಡ್‍ಗೆ ಹೋಗಲು ಆಟೋ ರಕ್ಷಾದಲ್ಲಿ ಸವಾರಿ ನಡೆಸಿದರು.

Comments

Leave a Reply

Your email address will not be published. Required fields are marked *