ಆಗಸ್ಟ್ 10ರೊಳಗೆ SSLC ಫಲಿತಾಂಶ: ಸುರೇಶ್ ಕುಮಾರ್

ಚಾಮರಾಜನಗರ: ಆಗಸ್ಟ್ 10 ರೊಳಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೊರಬೀಳಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 10ರೊಳಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಬರಲಿದೆ. ಇದೇ ಸೋಮವಾರ ಇಲ್ಲವೇ ಮಂಗಳವಾರ ಟಾಸ್ಕ್ ಫೋರ್ಸ್ ಸಮಿತಿ ವರದಿ ನೀಡಲಿದ್ದು, ಇದನ್ನಾಧರಿಸಿ ಶಾಲೆಗಳ ಭೌತಿಕ ತರಗತಿ ಆರಂಭದ ಕುರಿತು ನಿರ್ಧರಿಸಲಾಗುತ್ತದೆ. ಖಾಸಗಿ ಶಾಲೆಗಳ ಕಳಕಳಿಯನ್ನು ಸಹ ಅರ್ಥ ಮಾಡಿಕೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ವಿಧ್ಯಾರ್ಥಿನಿ ಆರೋಗ್ಯ ವಿಚಾರಿಸಿದ ಸಚಿವರು
ಬೆನ್ನು ನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ಸೈ ಎನಿಸಿಕೊಂಡ ವಿದ್ಯಾರ್ಥಿನಿಯನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶಂಸಿದ್ದಾರೆ. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ವಿದ್ಯಾರ್ಥಿನಿ ಶ್ವೇತಾ ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದಳು. ಶ್ವೇತಾ ಚೆನ್ನಾಗಿ ಓದುವ ವಿದ್ಯಾರ್ಥಿನಿಯಾಗಿದ್ದು, ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಹಠ ತೊಟ್ಟಿದ್ದಳು. ಅದರಂತೆ ಅನಾರೋಗ್ಯದ ಸ್ಥಿತಿಯಲ್ಲೂ ಪರೀಕ್ಷೆ ಬರೆದಿದ್ದಾಳೆ.

ಕೆಲ ತಿಂಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿ, ಒಂದು ತಿಂಗಳ ಹಿಂದೆ ನಿಮ್ಹಾನ್ಸ್ ನಲ್ಲಿ ಬೆನ್ನು ಮೂಳೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಪೋಷಕರು ಪರೀಕ್ಷೆ ಬರೆಸುವ ವಿಚಾರದಲ್ಲಿ ಗೊಂದಲಕ್ಕೀಡಾಗಿದ್ದರು. ಆದರೆ ಛಲ ಬಿಡದ ಶ್ವೇತಾ, ಪರೀಕ್ಷೆ ಬರೆದಿದ್ದಾಳೆ. ಈ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಾಸಕ ಎನ್.ಮಹೇಶ್ ಖುದ್ದು ವಿದ್ಯಾರ್ಥಿನಿ ಮನೆಗೆ ತೆರಳಿ ಬಾಲಕಿಯ ಯೋಗ ಕ್ಷೇಮ ವಿಚಾರಿಸಿದರು. ಅನಾರೊಗ್ಯದಿಂದ ಬಳಲುತ್ತಿದ್ದರೂ ದಿಟ್ಟತನದಿಂದ ಪರೀಕ್ಷೆ ಎದುರಿಸಿರುವುದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *