ಆಕ್ಸಿಜನ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡನಿಂದ ಪ್ರತಿಭಟನೆ

ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದ್ದು, ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಕೂಡಲೇ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂಟಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

ನವೋದಯ ಬೋಧಕ ಆಸ್ಪತ್ರೆಗೆ 210 ಆಕ್ಸಿಜನ್ ಸಿಲಿಂಡರ್ ಗಳ ಅಗತ್ಯವಿದೆ. ಆಕ್ಸಿಜನ್ ಬೆಡ್‍ನ 140 ಸೋಂಕಿತರಿಗೆ ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ಕೇವಲ 100 ಸಿಲಿಂಡರ್ ಮಾತ್ರ ಪೂರೈಕೆ ಮಾಡಿದೆ. ಸಿಲಿಂಡರ್ ಗೆ ಆಕ್ಸಿಜನ್ ಫಿಲ್ ಮಾಡುವ ಎಂಪಿಸಿಎಲ್ ಪ್ಲಾಂಟ್ ನಿನ್ನೆಯಿಂದ ಬಂದ್ ಆಗಿರುವುದು ಇನ್ನಷ್ಟು ಅನಾಹುತ ಸೃಷ್ಟಿಗೆ ಕಾರಣವಾಗುತ್ತಿದೆ. ಕೂಡಲೇ ಕನಿಷ್ಠ 35 ಸಿಲಿಂಡರ್ ನವೋದಯ ಆಸ್ಪತ್ರೆಗೆ ಸರಬರಾಜು ಮಾಡದಿದ್ದರೆ ದುರಂತ ನಡೆಯುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದರೆ ಚಾಮರಾಜನಗರದ ಘಟನೆ ಮರುಕಳಿಸುವ ಸಾಧ್ಯತೆಯಿದೆ. ಕೂಡಲೇ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಬೇಕು ಎಂದು ರವಿಬೋಸರಾಜು ಆಗ್ರಹಿಸಿದ್ದಾರೆ. ನವೋದಯ ಬೋಧಕ ಆಸ್ಪತ್ರೆಗೆ 1.8 ಕೆಎಲ್ ಆಕ್ಸಿಜನ್ ಜಿಲ್ಲಾಡಳಿತ ಸರಬರಾಜು ಮಾಡುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಆಕ್ಸಿಜನ್ ಸಿಲಿಂಡರ್ ಕೊರತೆ ಎದುರಾಗಿದೆ.

ಜಿಲ್ಲೆಯಲ್ಲಿ ಮೂರು ಆಕ್ಸಿಜನ್ ಪ್ಲಾಂಟ್‍ಗಳಿದ್ದು, 10 ರಿಂದ 12 ಕೆಎಲ್ ಆಕ್ಸಿಜನ್ ಸರಬರಾಜು ಆಗುತ್ತಿದೆ. ಈಗ ಒಂದು ಪ್ಲಾಂಟ್ ಬಂದ್ ಆಗಿರುವುದು ಆತಂಕಕ್ಕೆ ಎಡೆಮಾಡಿದೆ. ಅಲ್ಲದೆ ನಿನ್ನೆ ರಾಯಚೂರಿಗೆ ಬರಬೇಕಿದ್ದ ಆಕ್ಸಿಜನ್ ಟ್ಯಾಂಕರ್ ನ್ನು ಆಂಧ್ರ ಪ್ರದೇಶದ ಕರ್ನೂಲ್‍ಗೆ ಕಳುಹಿಸಲಾಗಿದ್ದು, ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ತಲೆದೂರುವ ಸಾಧ್ಯತೆಯಿದೆ. ಆಕ್ಸಿಜನ್ ಕೊರತೆ ಎದುರಾದರೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವುದು ಕಷ್ಟ ಎಂದು ಖಾಸಗಿ ಕೋವಿಡ್ ಆಸ್ಪತ್ರೆ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *