ಆಂಧ್ರದಲ್ಲಿ ಮತ್ತೊಂದು ರೋಗದ ಭೀತಿ- ಬಾಯಲ್ಲಿ ನೊರೆ ಬಂದು ಏಕಾಏಕಿ ಅಸ್ವಸ್ಥಗೊಂಡ ಜನ

– ನಿಗೂಢ ರೋಗಕ್ಕೆ ಓರ್ವ ಬಲಿ, 300ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಹೈದರಾಬಾದ್: ಮಹಾಮಾರಿ ಕೊರೊನಾದಿಂದ ದೇಶಾದ್ಯಂತ ಜನ ನಲುಗಿ ಹೋಗಿದ್ದಾರೆ. ಈ ಮಧ್ಯೆ ಆಂದ್ರಪ್ರದೇಶದಲ್ಲಿ ಸಾರ್ವಜನಿಕರಿಗೆ ಮತ್ತೊಂದು ರೋಗದ ಭೀತಿ ಎದುರಾಗಿದೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ನಿಗೂಢ ರೋಗವೊಂದು ಪತ್ತೆಯಾಗುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದೆ. ಬಾಯಲ್ಲಿ ನೊರೆ ಬಂದು ಏಕಾಏಕಿ ಜನ ಅಸ್ವಸ್ಥಗೊಂಡಿದ್ದಾರೆ. ಈ ನಿಗೂಢ ರೋಗಕ್ಕೆ ಓರ್ವ ಬಲಿಯಾಗಿದ್ದು, ಸುಮಾರು 300ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಲುರಿನ ಉತ್ತರ ಬೀದಿ, ದಕ್ಷಿಣ ಬೀದಿ, ಅಶೋಕ ನಗರ ಹಾಗೂ ಅರುಂಧತಿ ಪೇಟೆ ನಿವಾಸಿಗಳಲ್ಲಿ ಇದ್ದಕ್ಕಿದ್ದಂತೆ ತಲೆನೋವು, ವಾಂತಿ, ತಲೆ ತಿರುಗುವಿಕ್ ಹಾಗೂ ಮೂರ್ಛೆ ರೋಗ ಮುಂತಾದ ಲಕ್ಷಣಗಳು ಕಾಣಿಸಿಕೊಂಡಿದೆ. 45 ವರ್ಷದ ವ್ಯಕ್ತಿಯೊಬ್ಬರು ವಾಂತಿ ಹಾಗೂ ಮೂರ್ಛೆಗೊಂಡು ಭಾನುವಾರ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇನ್ನು ನಿಗೂಢ ರೋಗದಿಂದಾಗಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಜಯವಾಡಕ್ಕೆ ಶಿಫ್ಟ್ ಮಾಡಲಾಗಿದೆ. ಅಸ್ವಸ್ಥಗೊಂಡವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆಗೆ ಕಲುಷಿತಗೊಂಡ ನೀರು ಸೇವನೆಯೇ ಕಾರಣ ಎಂದು ಹೇಳಲಾಗುತ್ತಿದ್ದರೂ, ಈ ಸಂಬಂಧ ನಿಖರ ಕಾರಣ ತಿಳಿದುಬಂದಿಲ್ಲ. ಅಸ್ವಸ್ಥಗೊಂಡವರ ರಕ್ತದ ಮಾದರಿ ಪಡೆದು ವೈದ್ಯರು ಅಸಲಿ ಕಾರಣ ತಿಳಿಯುವ ಪ್ರಯತ್ನ ನಡೆಯುತ್ತಿದೆ. ಆಂದ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಈ ಸಂಬಂಧ ತನಿಖೆಗೆ ನಡೆಸುವಂತೆ ಆದೇಶಿಸಿದ್ದಾರೆ.

Comments

Leave a Reply

Your email address will not be published. Required fields are marked *