ಅವಳ ನಂಬಿಕೆಯನ್ನು ನಾವು ಉಳಿಸಿಕೊಳ್ಳಲಿಲ್ಲ: ವಿಜಯಲಕ್ಷ್ಮಿ ದರ್ಶನ್

ಬೆಂಗಳೂರು: ಗರ್ಭಿಣಿ ಆನೆ ಸಾವನ್ನಪ್ಪಿದ ಸುದ್ದಿ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದು ಹೆಚ್ಚು ಸದ್ದು ಮಾಡುತ್ತಿದ್ದು, ಮಾನವೀಯತೆ ಸತ್ತು ಹೋಗಿದೆ ಎಂಬ ಹ್ಯಾಷ್ ಟ್ಯಾಗ್‍ನೊಂದಿಗೆ ಹಲವರು ಆನೆ ಸಾವಿಗೆ ಮರುಕ ಪಡುತ್ತಿದ್ದಾರೆ. ಅದೇ ರೀತಿ ಇದೀಗ ಡಿ ಬಾಸ್ ಪತ್ನಿ ವಿಜಯಲಕ್ಷ್ಮಿ ಸಹ ಈ ಕೃತ್ಯವನ್ನು ಖಂಡಿಸಿದ್ದಾರೆ.

ಗರ್ಭಿಣಿ ಆನೆ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವೇ ಸೃಷ್ಟಿಯಾಗಿದ್ದು, ಹಲವರು ನಟ, ನಟಿಯರು, ಆಟಗಾರರು ಖಂಡನೆ ವ್ಯಕ್ತಪಡಿಸಿದ್ದಾರೆ. ಮಾನವೀಯತೆಯ ಕಗ್ಗೊಲೆ ಎಂದಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ನೀರಲ್ಲಿ ಮುಳುಗಿದ ಆನೆಯ ಗ್ರಾಫಿಕ್ ಫೋಟೋ ಹಂಚಿಕೊಂಡು, ಅಂತಿಮವಾಗಿ ಮಾನವೀಯತೆ ಸತ್ತಿತು. ಅವಳು ಗರ್ಭಿಣಿ, ನಮ್ಮನ್ನು ನಂಬಿದ್ದಳು. ಆದರೆ ನಾವು ಅದನ್ನು ಹುಸಿಯಾಗಿಸಿದೆವು. ದ್ರೋಹಕ್ಕೆ ಮತ್ತೊಂದು ಹೆಸರೇ ಮಾನವರು ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಕೇರಳದಲ್ಲಿ ಈ ಘಟನೆ ಸಂಭವಿಸಿದ್ದು, ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಗರ್ಭಿಣಿ ಆನೆಗೆ ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ತಿನಿಸಲಾಗಿತ್ತು. ಮದ್ದು ಬಾಯಿಯಲ್ಲಿಯೇ ಬ್ಲಾಸ್ಟ್ ಆಗಿದ್ದು, ತಕ್ಷಣವೇ ಹತ್ತಿರದಲ್ಲೇ ಇದ್ದ ನದಿಯಲ್ಲಿ ಆನೆ ಮುಳುಗಿತ್ತು. ಅಷ್ಟೊತ್ತಿಗೆ ಅರಣ್ಯಾಧಿಕಾರಿಗಳು ಸಹ ಘಟನಾ ಸ್ಥಳಕ್ಕೆ ಆಗಮಿಸಿದರು. ಆದರೆ ಆನೆ ಆಗಲೇ ಕೊನೆಯುಸಿರೆಳೆದಿತ್ತು. ಕೊನೆಗೂ ಪಾಪಿಗಳ ಕೃತ್ಯಕ್ಕೆ ಗರ್ಭಿಣಿ ಆನೆ ಹೊಟ್ಟೆಯಲ್ಲಿನ ತನ್ನ ಮಗುವಿನೊಂದಿಗೆ ಪ್ರಾಣ ಬಿಟ್ಟಿತ್ತು.

ಇದು ಸುದ್ದಿಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವಿಟ್ಟರ್ ನಲ್ಲಿ ಸಹ ಟ್ರೆಂಡಿಂಗ್‍ನಲ್ಲಿತ್ತು. ಹ್ಯುಮ್ಯಾನಿಟಿ ಇಸ್ ಡೆಡ್ ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ಅಭಿಯಾನವನ್ನೇ ಆರಂಭಿಸಲಾಗಿತ್ತು. ದೇಶಾದ್ಯಂತ ಹಲವು ಜನ ಮರುಕ ಪಟ್ಟಿದ್ದರು. ಅದೇ ರೀತಿ ವಿಜಯಲಕ್ಷ್ಮಿ ಸಹ ಈ ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆನೆಯ ಕಾರ್ಟೂನ್ ಫೋಟೋ ಟ್ವೀಟ್ ಮಾಡಿ, ಕೇರಳದ ಘಟನೆಯ ಬಗ್ಗೆ ಕೇಳಿ ತುಂಬಾ ಆಘಾತವಾಯಿತು. ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು, ಅವುಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಮನವಿ ಮಾಡುತ್ತೇನೆ. ಇಂತಹ ಹೇಡಿತನ ಕೃತ್ಯಗಳಿಗೆ ಅಂತ್ಯ ಹಾಡೋಣ ಎಂದು ಕರೆ ನೀಡಿದ್ದಾರೆ.

ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಸಹ ಇನ್‍ಸ್ಟಾಗ್ರಾಮ್‍ನಲ್ಲಿ ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ್ದು, ಇಂತಹ ಹೇಯ ಕೃತ್ಯ ಎಸಗಿದವರನ್ನು ಹಿಡಿದು ಶಿಕ್ಷಿಸಬೇಕು. ಈ ಮೂಲಕ ನ್ಯಾಯ ಒದಗಿಸಬೇಕು ಎಂದು ಕೇರಳ ಮುಖ್ಯಮಂತ್ರಿಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *