ಅವಳೊಂದಿಗೆ 3, ಇವಳೊಂದಿಗೆ 3 ದಿನ, ಒಂದು ದಿನ ರಜೆ- ಪತ್ನಿ, ಗೆಳತಿ ಜೊತೆ ವ್ಯಕ್ತಿ ಶೇರಿಂಗ್

– ಇಬ್ಬರಿಗೂ ಸಮಯ ನೀಡುವ ಉದ್ದೇಶದಿಂದ ಪ್ಲಾನ್

ರಾಂಚಿ: ಪತ್ನಿ ಜೊತೆ 3 ಹಾಗೂ ಗರ್ಲ್ ಫ್ರೆಂಡ್ ಜೊತೆ 3 ದಿನ ಬಳಿಕ ಒಂದು ರಜೆ ಎಂದು ವ್ಯಕ್ತಿಯೊಬ್ಬ ಒಪ್ಪಂದ ಮಾಡಿಕೊಂಡಿದ್ದು, ಖುಷಿಯಾಗಿ ಸಂಸಾರ ನಡೆಸುತ್ತಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಜಾರ್ಖಂಡ್‍ನ ರಾಂಚಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿ ತನ್ನ ಪತ್ನಿ ಹಾಗೂ ಗರ್ಲ್ ಫ್ರೆಂಡ್ ಇಬ್ಬರಿಗೂ ಸಮಯ ನೀಡುವ ಉದ್ದೇಶದಿಂದ ಒಪ್ಪಂದ ಮಾಡಿಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದಾನೆ. ಹೌದು ಪತ್ನಿ ಜೊತೆ 3 ದಿನ ಹಾಗೂ ಗರ್ಲ್ ಫ್ರಂಡ್ ಜೊತೆ ಮೂರು ದಿನ, ಒಂದು ದಿನ ಸ್ವತಂತ್ರವಾಗಿರಲು ರಜೆ ತೆಗೆದುಕೊಳ್ಳುತ್ತಾನೆ. ಹೀಗೆ ವಾರದ ದಿನಗಳನ್ನು ಎಂಜಾಯ್ ಮಾಡುತ್ತಾನೆ.

ವಿವಾಹಿತ ವ್ಯಕ್ತಿಯನ್ನು ರಾಜೇಶ್ ಮಹತೋ ಎಂದು ಗುರುತಿಸಲಾಗಿದ್ದು, ರಾಂಚಿಯ ಕೊಕಾರ್ ತಿರಿಲ್ ರಸ್ತೆಯ ನಿವಾಸಿಯಾಗಿದ್ದಾನೆ. ವ್ಯಕ್ತಿ ಪತ್ನಿ ಹಾಗೂ ಮಕ್ಕಳು ಇದ್ದರೂ ವಿವಾಹವಾಗಿಲ್ಲ ಎಂದು ಸುಳ್ಳು ಹೇಳಿ ಬೇರೊಬ್ಬ ಯುವತಿಯ ಜೊತೆ ಸಂಬಂಧ ಬೆಳೆಸಿದ್ದಾನೆ. ಬಳಿಕ ಪತ್ನಿ ಮಕ್ಕಳನ್ನು ಬಿಟ್ಟು ರಾಜೇಶ್ ಗರ್ಲ್ ಫ್ರಂಡ್ ಜೊತೆ ಓಡಿ ಹೋಗಿದ್ದ.

ಬಳಿಕ ಪ್ರಕರಣ ಸಂಬಂಧ ಕಳೆದ ವರ್ಷ ಜನವರಿಯಲ್ಲಿ ರಾಜೇಶ್ ಪತ್ನಿ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ನಂತರ ಗರ್ಲ್ ಫ್ರೆಂಡ್ ಮನೆಯವರು ಸಹ ಕಿಡ್ನ್ಯಾಪ್ ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ರಾಜೇಶ್ ಹಾಗೂ ಈತನ ಗರ್ಲ್ ಫ್ರೆಂಡ್ ನ್ನು ಪತ್ತೆ ಹಚ್ಚಿದ್ದು, ಇಷ್ಟರಲ್ಲಾಗಲೇ ಇಬ್ಬರೂ ವಿವಾಹವಾಗಿದ್ದರು. ಇಬ್ಬರೂ ಓಡಿ ಹೋಗಿ ವಿವಾಹವಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

ಇದಾದ ಬಳಿಕ ಪತ್ನಿ ಹಾಗೂ ಗರ್ಲ್ ಫ್ರೆಂಡ್ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಇಬ್ಬರು ಮಹಿಳೆಯರ ಮಧ್ಯೆ ನಡೆಯುತ್ತಿದ್ದ ಜಗಳವನ್ನು ಬಗೆಹರಿಸಿದ್ದಾರೆ. ಅಲ್ಲದೆ 3 ದಿನ ಪತ್ನಿ ಜೊತೆ ಹಾಗೂ 3 ದಿನ ಗರ್ಲ್ ಫ್ರೆಂಡ್ ಜೊತೆ, ಉಳಿದ ಒಂದು ದಿನ ರಜೆ ತೆಗೆದುಕೊಳ್ಳುವಂತೆ ರಾಜೇಶ್‍ಗೆ ಪೊಲೀಸರು ತಿಳಿಸಿದ್ದಾರೆ. ಬಳಿಕ ಎರಡೂ ಕಡೆಯವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಒಪ್ಪಿಗೆ ಸೂಚಿಸಿದ್ದಾರೆ.

ಬಳಿಕ ಕೆಲವೇ ದಿನಗಳಲ್ಲಿ ರಾಜೇಶ್ ಒಪ್ಪಂದ ಮುರಿದಿದ್ದು, ಈ ವೇಳೆ ಸುಳ್ಳು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಗರ್ಲ್ ಫ್ರೆಂಡ್ ದೂರು ದಾಖಲಿಸಿದ್ದಾಳೆ. ಇದೀಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ರಾಜೇಶ್ ವಿರುದ್ಧ ಅರೆಸ್ಟ್ ವಾರೆಂಟ್ ನೀಡಲಾಗಿದೆ. ಇದೀಗ ಪೊಲೀಸರು ರಾಜೇಶ್‍ನನ್ನು ಬಂಧಿಸಲು ಮುಂದಾಗಿದ್ದಾರೆ.

ಮೊದಲ ಪತ್ನಿ ರಾಜೇಶ್‍ನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಪೊಲೀಸರು ಬಂಧಿಸಲು ಆತನ ಮನೆಗೆ ತೆರಳುತ್ತಿದ್ದಂತೆ ಆತ ಓಡಿ ಹೋಗಲು ಸಹಾಯ ಮಾಡುತ್ತಿದ್ದಾಳೆ. ಪೊಲೀಸರು ಆತನನ್ನು ಬಂಧಿಸಲು ದಾಳಿ ನಡೆಸುತ್ತಲೇ ಇದ್ದಾರೆ.

Comments

Leave a Reply

Your email address will not be published. Required fields are marked *