ಅವನನ್ನೇ ಮದ್ವೆ ಆಗ್ತೀನಿ- ಚಿಕ್ಕಬಳ್ಳಾಪುರದಲ್ಲಿ ಮರ್ಯಾದಾ ಹತ್ಯೆ

-ಕತ್ತು ಹಿಸುಕಿ ಕೊಂದು ಕಲ್ಲು ಕಟ್ಟಿ ಕೆರೆಗೆ ಎಸೆದ್ರು
-ಅಂತರ್ಜಾತಿ ಮದ್ವೆಗೆ ಪೋಷಕರ ವಿರೋಧ

ಚಿಕ್ಕಬಳ್ಳಾಪುರ: ಅಂತರ್ಜಾತಿ ಯುವಕನನ್ನು ಪ್ರೀತಿಸಿದ ಯುವತಿಯನ್ನು ಪೋಷಕರು ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗಡಿ ಗ್ರಾಮದಲ್ಲಿ ನಡೆದಿದೆ.

ನೆರೆಯ ಆಂಧ್ರಪ್ರದೇಶ ಗೌರಿಬಿದನೂರು ಗಡಿಭಾಗದ ತೂಮಕುಂಟೆ ಗ್ರಾಮದ 18 ವರ್ಷದ ಸಂಧ್ಯಾ ಮೃತ ಯುವತಿ. ಮೃತ ಸಂಧ್ಯಾ ತಾಯಿ ರಾಮಾಂಜಿನಮ್ಮ, ಅಣ್ಣ ಅಶೋಕ್, ಅಕ್ಕ ನೇತ್ರಾವತಿ ಹಾಗೂ ಬಾವ ಬಾಲಕೃಷ್ಣ ಸೇರಿ ಕೊಲೆ ಮಾಡಿದ್ದಾರೆ. ಕೊಲೆಯ ಬಳಿಕ ಮೃತದೇಹಕ್ಕೆ ದೊಡ್ಡ ಗಾತ್ರದ ಕಲ್ಲು ಕಟ್ಟಿ ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ಬಳಿ ಕೆರೆಯಲ್ಲಿ ಬಿಸಾಡಿದ್ದರು. ಜೂನ್ 23ರಂದು ಮೃತದೇಹ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಂದ್ಯಾಳ ತಾಯಿ, ಸೋದರ, ಅಕ್ಕ ಮತ್ತು ಬಾವ

ಮೃತ ಸಂಧ್ಯಾ ಎರಡ್ಮೂರು ವರ್ಷಗಳ ಹಿಂದೆ ಅಂತರ್ಜಾತಿ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದು, ಆತನ ಜೊತೆ ಪರಾರಿಯಾಗಿದ್ದಳು. ಈ ಸಂಬಂಧ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಪ್ರಾಪ್ತೆ ಸಂಧ್ಯಾ ಜೊತೆ ಪರಾರಿಯಾಗಿದ್ದ ಪ್ರಕರಣ ಸಂಬಂದ ಆರೋಪಿ ಜೈಲು ಶಿಕ್ಷೆಗೆ ಗುರಿಯಾಗಿದ್ದು ಜೈಲುವಾಸ ಅನುಭಸುತ್ತಿದ್ದಾನೆ.

ಇತ್ತ ಸಂಧ್ಯಾ ಮನೆಯವರು ಈಕೆಗೆ ಬೇರೊಂದು ಮದುವೆ ಮಾಡಲು ವರನನ್ನ ಹುಡುಕುತ್ತಿದ್ದು ಇದು ಈಕೆಗೆ ಇಷ್ಟವಿರಲಿಲ್ಲ. ತನ್ನ ಪ್ರಿಯಕರನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದ್ದಳಂತೆ. ಇದರಿಂದ ರೋಸಿ ಹೋದ ಮೃತ ಸಂಧ್ಯಾಳ ಪೋಷಕರು ಕತ್ತು ಹಿಸುಕಿ ಆಕೆಯನ್ನ ಕೊಲೆ ಮಾಡಿ ತದನಂತರ ಮೃತದೇಹವನ್ನ ಗೌರಿಬಿದನೂರು ತಾಲೂಕು ಹುಲಿಕುಂಟೆ ಗ್ರಾಮದ ಬಳಿ ಕೆರೆಯಲ್ಲಿ ಆಕೆಯ ಮೃತದೇಹಕ್ಕೆ ದೊಡ್ಡ ಸೈಜುಗಲ್ಲು ಕಟ್ಟಿ ಹಾಕಿ ಬಿಸಾಡಿದ್ದರು.

ಜೂನ್ 23 ರಂದು ಮೃತದೇಹ ಪತ್ತೆಯಾಗಿ ಪ್ರಕರಣ ದಾಖಲಿಸಿಕೊಂಡ ಗೌರಿಬಿದನೂರು ಗ್ರಾಮಾಂತರ ಸಿಪಿಐ ರವಿಕುಮಾರ್, ಪ್ರಕರಣದಲ್ಲಿನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ತಾಯಿ, ಅಣ್ಣ, ಅಕ್ಕ, ಭಾವನನ್ನ ಬಂಧಿಸಿರುವ ಪೊಲೀಸರು ಪ್ರಕರಣದಲ್ಲಿ ತಂದೆಯ ಪಾತ್ರದ ಬಗ್ಗೆ ಮತ್ತಷ್ಟು ವಿಚಾರಣೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *