ಅವನು ದಡ್ಡನಲ್ಲ, ಕಿಲಾಡಿ – ಜಮೀರ್‌ನನ್ನು ಹಾಡಿಹೊಗಳಿದ ಸೋಮಣ್ಣ

– ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ

ಬೆಂಗಳೂರು: ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಎಲ್ಲ ಹಿಂದೂಗಳು ಒಳ್ಳೆಯವರಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ವಾರ್ಡ್‍ನಲ್ಲಿ ಈದ್ಗಾ ಮೈದಾನ ಕಾಂಪೌಂಡ್ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮಣ್ಣ, ಈ ಕಾಂಪೌಂಡ್ ಅನ್ನು ಆರು ತಿಂಗಳಿನಲ್ಲಿ ಕಟ್ಟಿಕೊಡುತ್ತೇನೆ. ಎಲ್ಲ ಜಾತಿ ಧರ್ಮಗಳಲ್ಲೂ ಒಳ್ಳೆಯವರು ಇರುತ್ತಾರೆ, ಕೆಟ್ಟವರು ಇರುತ್ತಾರೆ. ದೇವರು ಇದ್ದಾನೆ ಅಂದರೆ ಅಲ್ಲಿ ದೆವ್ವ-ಸೈತಾನ್‍ಗಳು ಇದ್ದೇ ಇರುತ್ತವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರನ್ನು ಹಾಡಿಹೊಗಳಿದ ಸೋಮಣ್ಣ, ಈ ಕಾರ್ಯಕ್ರಮಕ್ಕೆ ನಾನು ಜಮೀರ್ ನನ್ನು ಕರೆದುಕೊಂಡು ಬರಬೇಕು ಎಂದುಕೊಂಡಿದ್ದೆ. ಆದರೆ ಅವನು ಬರಲಿಲ್ಲ. ಅವನು ನನ್ನ ಆತ್ಮೀಯ, ಅವನು ದಡ್ಡ ಅಲ್ಲ, ಕಿಲಾಡಿ ಎಂದು ಹಾಡಿ ಹೊಗಳಿದರು. ಜಮೀರ್ ಕೇವಲ ಮುಸಲ್ಮಾರ ಎಂಎಲ್‍ಎ ಅಲ್ಲ, ಎಲ್ಲಾ ವರ್ಗದವರ ಎಂಎಲ್‍ಎ ಎಂದು ಹೇಳಿದರು.

ನನಗೆ ಜಮೀರ್ ಸಿಗಲಿಲ್ಲ. ಅವನನ್ನು ಹಿಡಿದುಕೊಂಡು ಬರೋಣ ಅಂದುಕೊಂಡೆ. ಇಲ್ಲಿ ಬಂದು ನಮ್ಮ ಕೆಲಸದ ಬಗ್ಗೆ ಮಾತಾಡು, ಏನೇನೋ ಹೇಳಿಬಿಟ್ಟು ಬೆಂಕಿ ಇಟ್ಟು ಓಡಿ ಹೋಗಬೇಡ ಎಂದು ಅವನಿಗೆ ಹೇಳೋಣ ಅಂದುಕೊಂಡಿದ್ದೆ ಎಂದು ಸೋಮಣ್ಣ ಹಾಸ್ಯ ಚಟಾಕಿ ಹಾಕಿದರು.

Comments

Leave a Reply

Your email address will not be published. Required fields are marked *