ಅವಕಾಶಕ್ಕಾಗಿ ಚಪ್ಪಲಿ ಹರಿದು ಹೋಗುವವರೆಗೂ ಅಲೆದಿದ್ದೇನೆ: ನಟಿ ಗಾನವಿ ಲಕ್ಷ್ಮಣ್

ಗಳು ಜಾನಕಿ ಸೀರಿಯಲ್ ಖ್ಯಾತಿಯ ಗಾನವಿ ಲಕ್ಷ್ಮಣ್ ಹೀರೋ ಸಿನಿಮಾ ಬಗ್ಗೆ ಹಾಗೂ ತಮ್ಮ ಕನಸುಗಳ ಬಗ್ಗೆ ಆರಂಭದ ದಿನಗಳ ಹೋರಾಟದ ಬಗ್ಗೆ ತಮ್ಮ ಅನಿಸಿಕೆಯನ್ನು ಪಬ್ಲಿಕ್‌ ಟಿವಿ ಜೊತೆ ಹಂಚಿಕೊಂಡಿದ್ದಾರೆ.

ಹೀರೋ ಸಿನಿಮಾ ಅನುಭವ ಹೇಗಿತ್ತು, ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ?
ಒಬ್ಬ ಕಲಾವಿದೆಗೆ ಏನು ಬೇಕೋ ಅದು ಈ ಟೀಮ್​ನಲ್ಲಿ ಇತ್ತು. ಹೀರೋ ಸಿನಿಮಾ ಕಥೆಯೇ ತುಂಬಾ ಇಂಟ್ರಸ್ಟಿಂಗ್ ಆಗಿದೆ. ತುಂಬಾ ಹಾರ್ಡ್ ವರ್ಕ್ ಮಾಡಿ ಎಲ್ಲರೂ ಕೆಲಸ ಮಾಡಿದ್ದೀವಿ. ನನ್ನ ಪಾತ್ರ ನನಗೆ ತುಂಬಾ ಖುಷಿ ಕೊಟ್ಟಿದೆ. ಒಂದೊಳ್ಳೆ ಅನುಭವ ಈ ಚಿತ್ರ ನೀಡಿದೆ. ರಿಷಭ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿರುವ ನಾತೂರಾಮ್ ಸಿನಿಮಾಲ್ಲಿ ರಿಷಭ್ ಜೋಡಿಯಾಗಿ ನಾನು ಆಯ್ಕೆಯಾಗಿದ್ದೆ. ಆಗ ರಿಷಭ್ ಪರಿಚಯವಾಗಿತ್ತು. ಆ ಸಿನಿಮಾ ಸದ್ಯಕ್ಕೆ ಪೋಸ್ಟ್ ಪೋನ್ ಆಗಿದೆ. ಅದೇ ಪರಿಚಯದ ಮೇಲೆ ರಿಷಭ್ ಹೀರೋ ಸಿನಿಮಾಗಾಗಿ ನನ್ನನ್ನು ಸಂಪರ್ಕಿಸಿದ್ರು. ಸಬ್ಜೆಕ್ಟ್ ತುಂಬಾ ಚೆನ್ನಾಗಿತ್ತು ನಟಿಸಲು ಒಪ್ಪಿಕೊಂಡೆ. ಅದಾದ ಮೇಲೆ ಪವಾಡದಂತೆ ಇಡೀ ಸಿನಿಮಾ ನಡೆದು ಹೋಯ್ತು.

ರಿಷಭ್ ಶೆಟ್ಟಿಯವರ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು ?
ಅವರೊಬ್ಬ ಸೂಪರ್ ಹೀರೋ. ತುಂಬಾ ಕಷ್ಟ ಪಟ್ಟು ಇಲ್ಲಿವರೆಗೆ ಬಂದಿದ್ದಾರೆ. ಅವರ ಜೊತೆ ಕೆಲಸ ಮಾಡೋದು ತುಂಬಾ ಹೆಮ್ಮೆಯ ವಿಚಾರ. ತಾವು ಬೆಳೆಯೋದರ ಜೊತೆ ತಮ್ಮ ತಂಡವನ್ನು ಬೆಳೆಸುತ್ತಾರೆ. ಹಲವಾರು ಪ್ರತಿಭಾವಂತರಿಗೆ ಸಿನಿಮಾ ಬರಹಗಾರರಿಗೆ ಅವಕಾಶ ನೀಡಿದ್ದಾರೆ. ಎಲ್ಲರನ್ನು ಅವರು ಮೋಟಿವೇಟ್ ಮಾಡುತ್ತಾರೆ. ಅವರಿಗೆ ಯಾವಾಗಲೂ ಒಳ್ಳೆಯದಾಗಲಿ ಎಂದು ನಾನು ಹಾರೈಸುತ್ತೇನೆ.

ಮಗಳು ಜಾನಕಿ ನಿಮ್ಮ ಕನಸಿಗೆ ನೀರೆರಿದು ಪೋಷಿಸಿತು?
ಗಾನವಿ ಲಕ್ಷ್ಮಣ್ ಎಂಬ ಕಲಾವಿದೆಯೊಬ್ಬಳು ಇದ್ದಾಳೆ ಅನ್ನೋದನ್ನ ಕರ್ನಾಟಕಕ್ಕೆ ಪರಿಚಯಿಸಿದ್ದೇ ಮಗಳು ಜಾನಕಿ ಧಾರಾವಾಹಿ. ಈ ವಿಚಾರದಲ್ಲಿ ನಾನು ಕಲರ್ಸ್​ ಕನ್ನಡಕ್ಕೆ ಧನ್ಯವಾದ ಹೇಳುತ್ತೇನೆ. ಇವತ್ತು ಸಿನಿಮಾಗಳಲ್ಲಿ ಅವಕಾಶ ಸಿಕ್ತಿದೆ ಅಂದ್ರೆ ಅದಕ್ಕೆ ಕಾರಣ ಮಗಳು ಜಾನಕಿ. ಇಲ್ಲಿ ನಾನು ಸೀತಾರಾಮ್​ ಸರ್ ಬಳಿ ಹಲವು ವಿಚಾರಗಳನ್ನು ಕಲಿತುಕೊಂಡೆ. ಇವತ್ತು ನಾನಿಲ್ಲಿ ಬಂದು ನಿಂತಿದ್ದೀನಿ ಅಂದ್ರೆ ಅದು ಮಗಳು ಜಾನಕಿ ಧಾರಾವಾಹಿ ಕೊಟ್ಟ ಜನಪ್ರಿಯತೆಯಿಂದ.

ಮೊದಲ ಬಾರಿಯೇ ಟಿ.ಎನ್​ ಸೀತಾರಾಮ್​ ಸರ್​ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಎಷ್ಟು ಖುಷಿ ಇದೆ?
ಹೌದು..ನಾನು ಆಡಿಷನ್​ನಲ್ಲಿ ಸೆಲೆಕ್ಟ್ ಆದಾಗ ಇಷ್ಟು ವರ್ಷ ಬೆಂಗಳೂರಿನಲ್ಲಿ ಅಲೆದದ್ದಕ್ಕೂ ಸಾರ್ಥಕವಾಯಿತು ಅನ್ನಿಸಿತು. ನಿಜಕ್ಕೂ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ತುಂಬಾ ಹೆಮ್ಮೆಯ ವಿಷಯ. ಪ್ರತಿಯೊಬ್ಬ ಕಲಾವಿದರಿಗೂ ಆರಂಭದಲ್ಲೇ ಅವರಂತ ಗುರುಗಳು ಸಿಕ್ಕರೆ ಬೇರೆಯದ್ದೇ ಲೆವೆಲ್​​ನಲ್ಲಿ ಬೆಳೆಯೋದು ಗ್ಯಾರೆಂಟಿ.

ಬೆಂಗಳೂರಿಗೆ ಬಂದ ಆರಂಭದ ದಿನಗಳು ಹೇಗಿತ್ತು?
ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡು, ಮನೆಯಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡು ಬೆಂಗಳೂರಿಗೆ ಬಂದ ಮೇಲೆ ನನಗೆ ನಿಜವಾದ ಜೀವನ ಏನು ಅನ್ನೋದು ಗೊತ್ತಾಯಿತು. ಬ್ಯಾಗ್ ಹಿಡಿದುಕೊಂಡು ಮೆಜೆಸ್ಟಿಕ್​ನಿಂದ ಚಪ್ಪಲಿ ಸವೆಯೋವರೆಗೂ ಅಲೆದಿದ್ದೇನೆ. ಅವಕಾಶಕ್ಕಾಗಿ ನಡೆಸಿದ ಹುಡುಕಾಟ ಅಷ್ಟಿಷ್ಟಲ್ಲ. ಮೆಜಿಸ್ಟಿಕ್​ನಿಂದ ಬ್ಯಾಗ್ ಹಿಡಿದ ಚಪ್ಪಲಿ ಹರಿದು ಹೋಗುವಷ್ಟು ಅಲೆದಿದ್ದೇನೆ. ಮಗಳು ಜಾನಕಿಗೆ ಅವಕಾಶ ಸಿಗುವುದಕ್ಕೂ ಮುನ್ನ ನಾನು ಪಟ್ಟ ಕಷ್ಟಗಳನ್ನು ಹೇಳಿಕೊಂಡರೆ ಯಾರೂ ನಂಬೋದಿಲ್ಲ.

ಲಾಕ್​ಡೌನ್​ ಲೈಫ್ ಹೇಗಿತ್ತು?
ಲಾಕ್​ ಡೌನ್​ ಆರಂಭದ ಎರಡು ತಿಂಗಳು ಊರಿನಲ್ಲಿ ಕಳೆದೆ. ಆದ್ರೆ ಕಲಾವಿದರಿಗೆ ಕೆಲಸವಿಲ್ಲದೆ ತುಂಬಾ ದಿನ ಕೂರೋಕೆ ಆಗಲ್ಲ. ಅವಕಾಶ ಸಿಕ್ಕಿದ್ರೆ ಸಾಕು ಎಂದು ಕಾಯುತ್ತಿದ್ದೆ ಆ ಟೈಂನಲ್ಲಿ ರಿಷಭ್ ಸರ್ ಹೀರೋ ಪ್ರಾಜೆಕ್ಟ್ ಬಗ್ಗೆ ಹೇಳಿದ್ರು. ಅನ್​ಲಾಕ್​​ ಸಮಯದಲ್ಲಿ ಇಡೀ ಶೂಟಿಂಗ್ ಕಂಪ್ಲೀಟ್ ಮಾಡಿದ್ವಿ. ಪೂರ್ತಿ ಚಿತ್ರೀಕರಣ ನನ್ನೂರಾದ ಚಿಕ್ಕಮಗಳೂರಲ್ಲೇ ನಡೆದಿದ್ದರಿಂದ ಹೆಚ್ಚಿನ ಸಮಯ ಕುಟುಂಬದ ಜೊತೆ ಊರಲ್ಲೇ ಕಳೆದೆ.

ನಟನೆ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ?
ಚಿಕ್ಕಂದಿನಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮವೆಂದರೆ ತುಂಬಾ ಪ್ರೀತಿ. ಡಿಗ್ರಿ ಮುಗಿಸಿದ ನಂತರ ಕಾಫಿ ಡೇ ಸಿದ್ದಾರ್ಥ್​ ಅವರ ಇಂಟರ್​​ ನ್ಯಾಶನಲ್​ ಸ್ಕೂಲ್​ನಲ್ಲಿ ಡಾನ್ಸ್​ ಟೀಚರ್ ಆಗಿ ಸೇರಿಕೊಂಡೆ. ಅಲ್ಲಿ ಮಕ್ಕಳಿಗೆ ಡಾನ್ಸ್ ಕಲಿಸುತ್ತಾ ನನಗೆ ಗೊತ್ತಿಲ್ಲದೆ ನನ್ನೊಳಗೊಬ್ಬಳು ಕಲಾವಿದೆಯನ್ನು ನಾನು ಕಂಡೆ. ನನ್ನ ಮನಸ್ಸೆಲ್ಲ ಕಲೆಯ ಕಡೆಯೇ ಹೊರಳುತ್ತಿತ್ತು. ಹಾಸ್ಟೆಲ್​ ವಿದ್ಯಾಭ್ಯಾಸ ಮಾಡಿದ್ದರಿಂದ ಸಿನಿಮಾ ನೋಡಿದ್ದೇ ಹೆಚ್ಚು. ಇದೆಲ್ಲವೂ ನನ್ನನ್ನೂ ನೀನು ನಟಿಯಾಗಲೇ ಬೇಕು ಎಂದು ಪುಶ್ ಮಾಡುತ್ತಿತ್ತು.

ನಿಮ್ಮ ಸ್ಪೂರ್ತಿ ಯಾರು?
ನನಗೆ ಕಲೆಯೇ ಒಂದು ಸ್ಪೂರ್ತಿ. ಆ ಪದದಲ್ಲೇ ಒಂದು ಶಕ್ತಿ ಇದೆ, ಅದನ್ನು ಕೇಳಿದಾಗ ನನಗೆ ರೋಮಾಂಚನವಾಗುತ್ತೆ. ಕಲೆಗೆ ಕಲಾವಿದರಿಗೆ ಯಾವತ್ತೂ ಸಾವಿಲ್ಲ ಕಲೆಯೇ ನನ್ನ ಜೀವನಕ್ಕೆ ಸ್ಪೂರ್ತಿ.

ಪ್ರತಿಯೊಬ್ಬ ಕಲಾವಿದರಿಗೂ ಒಂದು ಕನಸಿರುತ್ತೆ ನಿಮ್ಮ ಕನಸಿನ ಬಗ್ಗೆ ಹೇಳಿ?
ಕಲಾವಿದೆಯಾಗಿ ಕರ್ನಾಟಕವನ್ನು ಪ್ರಪಂಚದಾದ್ಯಂತ ಪ್ರತಿನಿಧಿಸಬೇಕು ಅನ್ನೋದು ನನ್ನ ದೊಡ್ಡ ಕನಸು. ಅದು ಈಡೇರುತ್ತೋ ಇಲ್ವೋ ಗೊತ್ತಿಲ್ಲ ಆದ್ರೆ ಕೊನೆಯವರೆಗೂ ಪ್ರಯತ್ನ ಪಡುತ್ತೇನೆ. ಕೊನೆವರೆಗೂ ಕಲಾವಿದೆಯಾಗಿಯೇ ಉಳಿಯಬೇಕು. ಎಲ್ಲೆ ಹೋದರೂ ಕೊನೆವರೆಗೂ ಕಲಾವಿದೆ ಎಂದೇ ಗುರುತಿಸಿಕೊಳ್ಳಬೇಕು ಅನ್ನೋದು ನನ್ನ ಮಹದಾಸೆ.

ಆರಂಭದಲ್ಲಿ ಮನೆಯಲ್ಲಿದ್ದ ವಿರೋಧ, ಈಗ ನಿಮ್ಮ ಬೆಳವಣಿಗೆ ನೋಡಿದ ನಂತರದ ಪ್ರತಿಕ್ರಿಯೆ ಹೇಗಿದೆ. ?
ಎಲ್ಲರ ಮನೆಯಲ್ಲೂ ಹೆಣ್ಣು ಮಕ್ಕಳು ಸಿನಿಮಾ ಕ್ಷೇತ್ರಕ್ಕೆ ಹೋಗ್ತೀವಿ ಅಂದಾಗ ಆತಂಕ ಇದ್ದೆ ಇರುತ್ತೆ ಅದೇ ರೀತಿ ನನ್ನ ಮನೆಯಲ್ಲೂ ಆಯ್ತು. ಆದ್ರೆ ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮನೆಯವರ ವಿರೋಧದ ನಡುವೆಯೂ ಬೆಂಗಳೂರಿಗೆ ಬಂದು ನಟನೆಯಲ್ಲಿ ತೊಡಗಿದೆ. ಈಗ ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ, ಖುಷಿ ಇದೆ. ನನ್ನ ಮಗಳು ಅಂದುಕೊಂಡಿದ್ದನ್ನು ಸಾಧಿಸಿದಳು ಎಂಬ ಹೆಮ್ಮೆ ಇದೆ.

ಗಾನವಿ ಲಕ್ಷ್ಮಣ್​ ಅವರು ಯಾವ ರೀತಿಯ ಹುಡುಗಿ?
ನಾನು ಸ್ಟ್ರೈಟ್ ಫಾರ್ವರ್ಡ್ ಹುಡುಗಿ. ತುಂಬಾ ರೆಸ್ಪಾನ್ಸಿಬಲ್ ಹೆಣ್ಣು ಮಗಳು. ರೂಲ್ಸ್ ಬ್ರೇಕ್​ ಮಾಡೋದು ಅಂದ್ರೆ ನಂಗೆ ತುಂಬಾ ಇಷ್ಟ. ಅಷ್ಟೇ ಬೋಲ್ಡ್ ಕೂಡ ಹೌದು. ತುಂಬಾ ಸ್ವಾಭಿಮಾನಿ ನನ್ನ ಸ್ವಾಭಿಮಾನಕ್ಕೆ ಸ್ವಲ್ಪ ಧಕ್ಕೆಯಾದ್ರೂ  ನಾನು ಆ ಸ್ಥಳದಲ್ಲಿ ಇರೋದಿಲ್ಲ.

ನಿಮ್ಮ ಹಾಗೆ ಸಿನಿಮಾ ಪ್ರೀತಿ ಇಟ್ಟುಕೊಂಡು ಚಿತ್ರರಂಗಕ್ಕೆ ಬರುವವರಿಗೆ ಏನು ಹೇಳೋಕೆ ಇಷ್ಟಪಡ್ತೀರಾ.?
ನಾನು ಎಲ್ಲರಿಗೂ ಹೇಳೊದಿಷ್ಟೆ ಯಾವುದೂ ಸುಲಭವಾಗಿ ಸಿಗೋದಿಲ್ಲ. ಕಲೆಯನ್ನು ತುಂಬಾ ಭಕ್ತಿ ಹಾಗೂ ಶ್ರದ್ದೆಯಿಂದ ಒಲಿಸಿಕೊಳ್ಳಬೇಕು. ನಾವು ಕಲೆಗೆ ಎಷ್ಟು ಗೌರವ ತೋರಿಸುತ್ತೇವೋ ಅಷ್ಟೇ ಒಳ್ಳೆಯ ಸ್ಥಾನಕ್ಕೆ ಅದು ನಮ್ಮನ್ನು ಕರೆದುಕೊಂಡು ಹೋಗುತ್ತೆ. ಇದಕ್ಕೆಲ್ಲ ದೃಢ ನಿರ್ಧಾರ, ಧೃಡ ಸಂಕಲ್ಪ ಬೇಕು ಸುಮ್ಮನೆ ಶೋಕಿಗಾಗಿ ಬರಬಾರದು ಅನ್ನೋದು ನನ್ನ ಅಭಿಪ್ರಾಯ.

ನಿಮ್ಮ ಫಿಟ್​​ನೆಸ್​​ ಮಂತ್ರದ ಬಗ್ಗೆ ಹೇಳಿ.
ಲಾಕ್​ಡೌನ್ ಸಮಯದಲ್ಲಿ ಫಿಟ್​ನೆಸ್​ ಕಡೆ ಹೆಚ್ಚು ಗಮನ ಕೊಡಲು ಆಗಲಿಲ್ಲ. ಪ್ರತಿಯೊಬ್ಬರಿಗೂ ಫಿಟ್​ನೆಸ್ ತುಂಬಾ ಮುಖ್ಯ ಅದರಲ್ಲೂ ಕಲಾವಿದರೆಗೆ ಫಿಟ್​​ನೆಸ್​ ಇಲ್ಲ ಅಂದ್ರೆ ಆಗೋದೇ ಇಲ್ಲ. ನಾನು ಆ ಬಗ್ಗೆ ತುಂಬಾ ಗಮನ ಹರಿಸುತ್ತೇನೆ. ಯೋಗ ಇನ್ಸ್​ಸ್ಟ್ರಕ್ಟರ್​ ಆಗಿಯೂ ಕೆಲಸ ಮಾಡಿರೋದ್ರಿಂದ ದೇಹವನ್ನು ಹೇಗೆ ಆರೋಗ್ಯವಾಗಿ ಇಡಬೇಕು ಅನ್ನೋದು ಗೊತ್ತಿದೆ.

ಧಾರಾವಾಹಿಯಲ್ಲಿ ಮತ್ತೆ ಅವಕಾಶ ಸಿಕ್ಕರೆ ಮಾಡುತ್ತೀರಾ?
ಖಂಡಿತಾ ಇಲ್ಲ. ನಾನು ಆಕ್ಟಿಂಗ್ ಮಾಡಬೇಕೆಂದು ನಿರ್ಧರಿಸಿದ್ದೆ ತುಂಬಾ ಲೇಟ್ ಆಗಿ. ನನಗೆ ಚಿಕ್ಕಂದಿನಿಂದಲೂ ಸಿನಿಮಾದಲ್ಲೇ ನಟಿಸಬೇಕು ಅನ್ನೋದೇ ಮಹದಾಸೆ. ಆರಂಭದಲ್ಲಿ ಸಿನಿಮಾದಲ್ಲೇ ಪಾದಾರ್ಪಣೆ ಮಾಡಬೇಕು ಎಂದು ತುಂಬಾ ಕನಸಿತ್ತು. ಧಾರಾವಾಹಿ ಮುಖಾಂತರವೇ ನನ್ನ ಕೆರಿಯರ್ ಶುರುವಾಗಬೇಕೆಂದು ಆ ದೇವರು ಬರೆದಿದ್ದ ಅನ್ನಿಸುತ್ತೆ ಅದರಂತೆ ಆಯಿತು. ಇನ್ನೇನಿದ್ರು ನನ್ನ ಜರ್ನಿ ಸಿನಿಮಾದಲ್ಲೇ ಇರುತ್ತೆ.

Comments

Leave a Reply

Your email address will not be published. Required fields are marked *