ಅಲೆಮಾರಿಗಳಿಗೆ ಪರಿಹಾರ, ಆಹಾರ ಪದಾರ್ಥಗಳ ಕಿಟ್ ಕೊಡುವಂತೆ ಸಿಎಂಗೆ ದ್ವಾರಕನಾಥ್ ಮನವಿ

ಬೆಂಗಳೂರು: ಕೊರೊನಾ ರೋಗವನ್ನು ಹತೋಟಿಗೆ ತರಲು ತಾವು ಮಾಡುತ್ತಿರುವ ಕೆಲಸದ ಬಗ್ಗೆ ನಮಗೆ ಗೌರವವಿದೆ. ಇಂತಹ ಸಂದರ್ಭದಲ್ಲಿ ತಮ್ಮ ಸರ್ಕಾರದಿಂದ ಸಂಕಷ್ಟದಲ್ಲಿ ಸಿಲುಕಿರುವ ಅಲೆಮಾರಿಗಳಿಗೆ ಪರಿಹಾರ, ಆಹಾರ ಪದಾರ್ಥಗಳ ಕಿಟ್ ಕೊಡುವಂತೆ ಸಿಎಂಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?

ಆಟೋ ಚಾಲಕರು, ವಾಹನ ಚಾಲಕರು, ಕಟ್ಟಡ ಕಾರ್ಮಿಕರಿಗೆ, ಕ್ಷೌರಿಕರು, ಮಡಿವಾಳರು, ನೇಕಾರರು ಮುಂತಾದ ಹಿಂದುಳಿದ ಸಮುದಾಯಗಳಿಗೆ, ಹಾಗೂ ಹಲವಾರು ಕಾರ್ಮಿಕ ವರ್ಗದ ಪ್ರತಿ ಕುಟುಂಬಕ್ಕೂ ನೆರವನ್ನು ಘೋಷಣೆ ಮಾಡಿರುವ ತಮ್ಮ ಕಾಳಜಿಗಾಗಿ ತಮಗೆ ವೈಯಕ್ತಿಕವಾಗಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾದ ವತಿಯಿಂದ ಕೃತಜ್ಞತೆಯನ್ನು ತಿಳಿಸುತ್ತೇವೆ.

ಈ ಹಿಂದಿನ ಉಲ್ಲೇಖಿತ ಪತ್ರಗಳಲ್ಲಿ ತಿಳಿಸಿದಂತೆ ಕರ್ನಾಟಕದ ಎಲ್ಲಾ ಅಸಹಾಯಕ ಅಲೆಮಾರಿ ಸಮುದಾಯಗಳ ಪ್ರತಿನಿಧಿಯಾಗಿ ನಮ್ಮ ಅಲೆಮಾರಿಗಳ ಆಕ್ರಂದನವನ್ನು ಮತ್ತೊಮ್ಮೆ ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಅಲೆಮಾರಿಗಳು ಊರಾಚೆಯ ಸ್ಮಶಾನದಲ್ಲಿ, ಪಾಳುಮಂಟಪಗಳಲ್ಲಿ, ರೈಲ್ವೆ ಹಳಿಗಳ ಪಕ್ಕದಲ್ಲಿ, ಹಳೆಯ ಬಟ್ಟೆಗಳಿಂದ ಜೋಪಡಿಗಳನ್ನು ಹಾಕಿಕೊಂಡು ಊರಾಚೆ ಬದುಕುವುದರಿಂದ ಸದರಿ ಅಲೆಮಾರಿಗಳು ಯಾವ ಸರ್ಕಾರಿ ಅಧಿಕಾರಿಗಳಿಗಾಗಲಿ, ಅಥವಾ ಜನ ಪ್ರತಿನಿಧಿಗಳಿಗಾಗಲಿ ಸಾಮಾನ್ಯವಾಗಿ ಕಾಣುಸಿಗುವುದಿಲ್ಲ.

ನಮ್ಮ ಅಲೆಮಾರಿಗಳು ಊರೂರು ಅಲೆಯುತ್ತಾ ತಮ್ಮ ಕುಲ ಕಸುಬುಗಳಾದ ತೊಗಲುಗೊಂಬೆಯಾಟ, ಬೀಗ ರಿಪೇರಿ, ಛತ್ರಿ ರಿಪೇರಿ, ಗಾರುಡಿ, ಕಸರತ್ತಿನ ಕಲೆ, ದೊಂಬರಾಟ, ನಾಟಿಮದ್ದು ಮಾರುವುದು, ಸೂಜಿದಾರ, ಪಿನ್ನಮಾರುವುದು, ಕೂದಲು ಆರಿಸುವುದು, ಹಚ್ಚೆ ಹಾಕುವುದು, ಪ್ಲಾಸ್ಟಿಕ್ ವಸ್ತುಗಳ ಮಾರಾಟ, ದೇವರ ಪೆÇೀಟೋ ಮಾರುವುದು, ಶಾಸ್ತ್ರ ಹೇಳುವುದು, ಮೋಡಿ ಆಟ ಇತ್ಯಾದಿ ಪ್ರದರ್ಶನ ಕಲೆಗಳ ಸೇವೆ ಮಾಡುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಿರುತ್ತಾರೆ. ಹೀಗೆ ಅಲೆಮಾರಿಗಳಾಗಿರುವುದರಿಂದ ಇವರಿಗಾಗಲಿ, ಇವರ ಮಕ್ಕಳಿಗಾಗಲಿ ಶಿಕ್ಷಣವೆಂಬುದು ಮರೀಚಿಕೆಯಾಗಿದೆ. ಇವರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನ ಚೀಟಿಯಾಗಲಿ, ಯಾವುದೇ ದಾಖಲೆಗಳಿಲ್ಲದೆ ಇರುವುದರಿಂದ ಸರ್ಕಾರ ನೀಡುವ ಏಲ್ಲಾ ನೆರವಿನಿಂದ ಅಪಾರವಾಗಿ ವಂಚಿತರಾಗುತ್ತಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಅಲೆಮಾರಿಗಳಿಗೆ ಸರ್ಕಾರದಿಂದ ನೀಡುವ ಯಾವುದೇ ಹಣಕಾಸಿನ ನೆರವಾವಾಗಲಿ, ಹಾಗು ಸರ್ಕಾರದಿಂದ ವಿತರಿಸಿದ ಪಡಿತರವಾಗಲಿ ಸಿಗದೆ ಏಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಂತಹ ಸೌಲಭ್ಯ ವಂಚಿತ ಅಲೆಮಾರಿಗಳು ಹಸಿವಿನಿಂದ ನರಳುತ್ತಾ ಅನ್ನಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಅಲೆಮಾರಿಗಳ ಜೀವನ ತುಂಬಾ ದುಸ್ಥಿತಿಯಲ್ಲಿದೆ ಹಾಗೂ ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದು, ಅನೇಕ ಅಲೆಮಾರಿಗಳಿಗೆ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಕೊರೊನಾದಿಂದ ಸಾಯುವುದು ಒಂದುಕಡೆಯಾದರೆ ಹಸಿವಿನಿಂದ ಕೆಲವೇ ದಿನಗಳಲ್ಲಿ ಅನೇಕರು ಸಾಯುವುದರಲ್ಲಿ ಯಾವುದೇ ಸಂಶಯವಿಲ್ಲ.

ರಾಜ್ಯದ ಕೆಲವು ಕಡೆ ಈ ಅಲೆಮಾರಿಗಳಿಗೆ ಸಂಘ ಸಂಸ್ಥೆಗಳು ಅಲ್ಪ ಸ್ವಲ್ಪ ಸಹಾಯ ಮಾಡಿರುವುದನ್ನು ಬಿಟ್ಟರೆ ಬೇರೆ ಯಾವುದೇ ಜಿಲ್ಲಾಡಳಿತಗಳಾಗಲಿ, ತಾಲ್ಲೂಕು ಆಡಳಿತಗಳಾಗಲಿ ನೆರವು ನೀಡದೇ ಮೌನವಹಿಸಿವೆ. ಅಲೆಮಾರಿಗಳ ಅಭಿವೃದ್ಧಿಗಾಗಿಯೇ ಸ್ಥಾಪನೆಯಾದ ರಾಜ್ಯ ಪ.ಜಾತಿ, ಪ.ವರ್ಗದ ಅಲೆಮಾರಿ ಅಭಿವೃದ್ಧಿ ಕೋಶದಿಂದಾಗಲಿ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದಾಗಲಿ ಯಾವುದೇ ನೆರವನ್ನೂ ಸಹ ಈವರೆಗೂ ನೀಡಿಲ್ಲ. ಕೊರೊನಾದಿಂದಾಗಿ ಕಳೆದ ಒಂದು ವರ್ಷದಿಂದ ಯಾವುದೇ ಬೀದಿ ಬದಿಯ ಹಾಗು ಹಳ್ಳಿ ಹಳ್ಳಿ ಸುತ್ತಿ ಸಣ್ಣಪುಟ್ಟ ವ್ಯಾಪಾರ ಗಳನ್ನು ಮಾಡಲು ಸಾಧ್ಯವಾಗದೇ ಇರುವುದರಿಂದ ಈಗ ಮನೆಗೆ ಒಂದು ಬೆಂಕಿಪೊಟ್ಟಣವನ್ನು ಸಹ ತರಲು ಸಾಧ್ಯವಾಗದ ಸ್ಥಿತಿಯಲ್ಲಿ ತುಂಬಾ ಸಂಕಷ್ಟದಲ್ಲಿ ನರಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ತಾವುಗಳು ನಮ್ಮ ರಾಜ್ಯದಲ್ಲಿ ಇರುವ ಏಲ್ಲಾ SC/ST, ಹಾಗು OBC ಹಾಗೂ ಅಲ್ಪಸಂಖ್ಯಾತ ಅಲೆಮಾರಿಗಳನ್ನು ಮೊನ್ನೆ ಘೋಷಿಸಿದ ವಿಶೇಷ ಪ್ಯಾಕೇಜ್ ನಲ್ಲಿ ಸೇರಿಸದಿರುವುದು ತೀರಾ ನೋವನ್ನುಂಟು ಮಾಡಿದೆ. ತಾವುಗಳು ನಮ್ಮ ಈ ಕೋರಿಕೆ ಪತ್ರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ನಮಗೆ ಈ ಕೆಳಗಿನಂತೆ ನೆರವು ನೀಡಬೇಕೆಂದು ಕೋರುತಿದ್ದೇವೆ.

* ನಮ್ಮ ರಾಜ್ಯದಲ್ಲಿ ಇರುವ ಅಲೆಮಾರಿಗಳ ಪ್ರತಿ ಕುಟುಂಬಕ್ಕೂ ಸಹ 5000 ರೂ. ಗಳ ನೆರವಿನ ಹಣವನ್ನು ಅತ್ಯಂತ ತುರ್ತಾಗಿ ಬಿಡುಗಡೆ ಮಾಡಬೇಕು.
*ಸಂಪೂರ್ಣ ಅಡುಗೆ ಪದಾರ್ಥಗಳಿರುವ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಕೂಡಲೆ ವಿತರಿಸಲು ತಾವುಗಳು ಕ್ರಮ ಕೈಗೊಂಡು ನೊಂದ ಅಲೆಮಾರಿಗಳಿಗೆ ನೆರವಾಗಬೇಕೆಂದು ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ( ರಿ)ದ ವತಿಯಿಂದ ನಿವೇದಿಸುತ್ತೇನೆ.

Comments

Leave a Reply

Your email address will not be published. Required fields are marked *