ಅರ್ಚಕರಿಗೆ ಕೋವಿಡ್ ಪರಿಹಾರ ನೀಡಿದಂತೆ ಇಮಾಮರಿಗೂ ಪರಿಹಾರ ಘೋಷಿಸಿ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಆಗ್ರಹ

ಬೆಂಗಳೂರು: ಕೋವಿಡ್ ನಿಗ್ರಹಕ್ಕಾಗಿ ವಿಧಿಸಲಾಗಿರುವ ಲಾಕ್‍ಡೌನ್ ವೇಳೆ ರಾಜ್ಯ ಸರಕಾರವು ದೇವಸ್ಥಾನಗಳ ಅರ್ಚಕರಿಗೆ ಪರಿಹಾರ ನೀಡಿದಂತೆ ಮಸ್ಜಿದ್ ಇಮಾಮರಿಗೂ ಪರಿಹಾರ ಘೋಷಿಸಬೇಕೆಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಆಗ್ರಹಿಸಿದ್ದಾರೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರವು ಪರಿಹಾರವನ್ನು ಘೋಷಿಸಿದೆ. 33.45 ಕೋಟಿ ರೂಪಾಯಿ ಮುಂಗಡ ತಸ್ತಿಕ್ ಜೊತೆಗೆ 4.50 ಕೋಟಿ ರೂ. ವರ್ಷಾಸನವನ್ನೂ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಅದರೊಂದಿಗೆ ಆಹಾರ ಕಿಟ್‍ನ ವ್ಯವಸ್ಥೆಗೂ ಆದೇಶ ಹೊರಡಿಸಿದೆ. ಇದೇ ವೇಳೆ ಮಸೀದಿಗಳ ಇಮಾಮರು ಮತ್ತು ಮುಅಝ್ಝಿನ್ ಗಳು, ಚರ್ಚ್‍ನ ಪಾದ್ರಿಗಳು ಸೇರಿದಂತೆ ಇತರ ಧಾರ್ಮಿಕ ಕ್ಷೇತ್ರಗಳ ಸಿಬ್ಬಂದಿಗೆ ಯಾವುದೇ ಪರಿಹಾರ ಘೋಷಣೆ ಮಾಡದಿರುವುದು ರಾಜ್ಯ ಸರಕಾರದ ಧಾರ್ಮಿಕ ಅಸಹಿಷ್ಣುತೆಯನ್ನು ಎತ್ತಿ ತೋರಿಸುತ್ತದೆ.

ರಾಜ್ಯ ಸರಕಾರವು ಮಾನವೀಯತೆಯ ತಳಹದಿಯಲ್ಲಿ ಪರಿಹಾರ ಘೋಷಣೆ ಮಾಡಬೇಕೇ ಹೊರತು ಧರ್ಮಾಧರಿತ ರಾಜಕೀಯದ ಆಧಾರದಲ್ಲಿ ಅಲ್ಲ. ಎಲ್ಲಾ ಧಾರ್ಮಿಕ ಕ್ಷೇತ್ರಗಳ ಸಿಬ್ಬಂದಿಯನ್ನು ಸಮಾನವಾಗಿ ಕಾಣುವುದರ ಜೊತೆಗೆ ಅವರಿಗೆ ಸಮಾನ ನ್ಯಾಯವನ್ನು ಖಾತರಿಪಡಿಸಬೇಕು. ಲಾಕ್‍ಡೌನ್‍ನಿಂದಾಗಿ ಅತಂತ್ರರಾಗಿರುವ ಈ ಸಿಬ್ಬಂದಿಗೆ ಸರಕಾರವು ತಕ್ಷಣಕ್ಕೆ ಜಾರಿಯಾಗುವಂತೆ ಪರಿಹಾರ ಘೋಷಿಸಿ ಅವರ ಸಂಕಷ್ಟಕ್ಕೆ ನೆರವಾಗಬೇಕು. ಅದೇ ರೀತಿ ಪರಿಹಾರ ಬಿಡುಗಡೆಗಾಗಿ ವಕ್ಫ್ ಬೋರ್ಡ್ ಕೂಡ ಸರಕಾರವನ್ನು ಆಗ್ರಹಿಸಬೇಕೆಂದು ಮೌಲಾನಾ ಅತೀಕುರ್ರಹ್ಮಾನ್ ಅಶ್ರಫಿ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *