ಅಯೋಧ್ಯೆ ನಗರದಲ್ಲಿ 5 ಎಕರೆ ಜಮೀನು ಕೇಳಿದ್ದೇವೆ: ಸಚಿವ ಕೋಟ

– ಶ್ರೀನಿವಾಸ್ ಕುಟುಂಬದಿಂದ ಅಮೃತೇಶ್ವರಿ ದೇವಿಗೆ ಪೂಜೆ

ಉಡುಪಿ: ರಾಜ್ಯ ಮುಜರಾಯಿ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಕೋವಿಡ್ ಟೆಸ್ಟ್ ಮಾಡಿಸಿದ್ದ ಸಚಿವ ಕೋಟ ಅವರ ವೈದ್ಯಕೀಯ ವರದಿ ಬರುವತನಕ ಮನೆಯಲ್ಲೇ ಕ್ವಾರಂಟೈನ್ ಆಗಿದ್ದು, ರಿಪೋರ್ಟ್ ನೆಗೆಟಿವ್ ಎಂದು ಗೊತ್ತಾದ ಕೂಡಲೇ ಅಮೃತೇಶ್ವರಿ ದೇವಸ್ಥಾನಕ್ಕೆ ತೆರಳಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ನೆರವೇರಿದ ಹಿನ್ನೆಲೆಯಲ್ಲಿ ದೇವಿಗೆ ವಿಶೇಷ ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಕೆ ಮಾಡಿದರು. ದಂಪತಿ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ ಸಚಿವರು, ಶ್ರೀರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲಿ. ಭವ್ಯವಾದ ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾಗಿ ಭಕ್ತಕೋಟಿಗೆ ದರ್ಶನ ಕೊಡಲಿ ಎಂದು ದೇವರ ಮುಂದೆ ಪ್ರಾರ್ಥಿಸಿದರು.

ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ರಾಮಮಂದಿರಕ್ಕೆ ಅಡಿಗಲ್ಲು ಮತ್ತು ಭೂಮಿಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದ್ದಾರೆ. ರಾಜ್ಯದಲ್ಲಿ ಎಲ್ಲಾ ಖಾಸಗಿ ಮತ್ತು ಸರ್ಕಾರಿ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಪೂಜೆ ನೆರವೇರಿದೆ. ಸಕಲ ಸಮಸ್ಯೆಗಳು ದೂರಾಗಿ ಶೀಘ್ರ ರಾಮಮಂದಿರ ನಿರ್ಮಾಣ ಆಗಲಿದೆ ಎಂದು ವಿಶ್ವಾಸ ವ್ಯಕ್ತಗೊಳಿಸಿದರು.

ಆಯೋಧ್ಯಾ ನಗರದಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡುವ ಪ್ರಸ್ತಾವನೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇನೆ. ಕರ್ನಾಟಕದ ಯಾತ್ರಾರ್ಥಿಗಳು ರಾಮಮಂದಿರಕ್ಕೆ ತೆರಳುವ ಸಂದರ್ಭ ಈ ಭವನ ಉಪಯೋಗಕ್ಕೆ ಬರಬೇಕಿದೆ. ಅಯೋಧ್ಯೆ ನಗರದಲ್ಲಿ 5 ಎಕರೆ ಜಮೀನನ್ನು ಕರ್ನಾಟಕಕ್ಕೆ ಕೊಡಬೇಕು ಅಂತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಭಿನ್ನಹ ಮಾಡಿಕೊಳ್ಳುತ್ತಿದ್ದೇನೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

Comments

Leave a Reply

Your email address will not be published. Required fields are marked *