ಅಮ್ಮ ನನ್ನ ಬಿಟ್ಟು ಹೋಗಿ ಇಂದಿಗೆ 26 ವರ್ಷ: ಜಗ್ಗೇಶ್

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ತನ್ನ ಬಾಲ್ಯ, ಕಷ್ಟದ ದಿನ, ಸಂತಸ, ನೋವು ಎಲ್ಲವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಇದೀಗ ತಮ್ಮ ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ.

ನಟ ಜಗ್ಗೇಶ್ ಅವರಿಗೆ ತಾಯಿ ನಂಜಮ್ಮ ಎಂದರೆ ತುಂಬಾ ಪ್ರೀತಿ. ನಂಜಮ್ಮ 1993ರಲ್ಲಿ ನಿಧನರಾಗಿದ್ದರು. ಜಗ್ಗೇಶ್ ಅವರ ತಾಯಿ ನಿಧನರಾಗಿ ಇಂದಿಗೆ 26 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ತಾಯಿಯ ಅಗಲಿಕೆಯ ನೋವನ್ನು ಹಂಚಿಕೊಂಡಿದ್ದಾರೆ.

“ನನಗೆ ಉಸಿರು ನೀಡಿ ಜಗತ್ತಿಗೆ ಪರಿಚಯಿಸಿ, ಜಗದಲ್ಲಿ ಬದುಕುವ ವಿಧಿವಿಧಾನ, ಸಂಸ್ಕಾರ, ಆಧ್ಯಾತ್ಮ ಕಲಿಸಿದ ಪ್ರಥಮ ದೇವರು ಗುರು ನನ್ನ ಅಗಲಿದ ದಿನ. ಅಮ್ಮ ನನ್ನ ಬಿಟ್ಟುಹೋಗಿ ಇಂದಿಗೆ 26 ವರ್ಷವಾಗಿದೆ. ಅವಳ ಇಂದು ಮಾತ್ರ ನೆನೆವ ಜನ್ಮವಲ್ಲಾ ನನ್ನದು. ಅವಳನ್ನ ನನ್ನ ಉಸಿರಿನ ಜೊತೆಯೇ ಬೆರೆಸಿರುವೆ. ಅವಳ ಕೊನೆ ಉಸಿರಿನ ಕೊಠಡಿಯ ಚಿತ್ರವಿದು. ಮಾತೃದೇವೋಭವ” ಎಂದು ಬರೆದುಕೊಂಡಿದ್ದಾರೆ.

ಜಗ್ಗೇಶ್ ತಾಯಿ ನಂಜಮ್ಮ ತಮ್ಮ ಮಗ ಕೋಮಲ್ ಮದುವೆಯಾದ 20 ದಿನಕ್ಕೆ ಮೃತಪಟ್ಟಿದ್ದಾರೆ. ಈ ಹಿಂದೆ ಜಗ್ಗೇಶ್ ಈ ಬಗ್ಗೆ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದರು. “ಅಮ್ಮ ನನಗೆ ಬೇಗ ಕೋಮಲ್ ಮದುವೆ ಮಾಡಿಸು ಈಶ. ಯಾಕೋ ಶಿವ ಕರೆದಂತೆ ಆಗುತ್ತಿದೆ ಎಂದು ಹಿಂಸೆಕೊಟ್ಟಳು. ವಾರದಲ್ಲೆ ಸ್ನೇಹಿತನ ತಂಗಿಯನ್ನ ಒಪ್ಪಿಸಿ 20 ವರ್ಷದ ಕೋಮಲ್‍ಗೆ ಮದುವೆ ಮಾಡಿಸಿಬಿಟ್ಟೆ. ಕೂತು ಚಪ್ಪಾಳೆತಟ್ಟಿ ಆನಂದಿಸಿ ಅವನು ಮದುವೆಯಾದ 20 ದಿನಕ್ಕೆ ದೇಹತ್ಯಾಗ ಮಾಡಿಬಿಟ್ಟಳು ಅಮ್ಮ” ಎಂದು ಪೋಸ್ಟಿನಲ್ಲಿ ಜಗ್ಗೇಶ್ ಬರೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *