ಅಮ್ಮನನ್ನು ಕದ್ದ ಕಳ್ಳರು, ಕಾರಿನ ಹಿಂದೆಯೇ ಓಡಿದ ಕರು

ಚಿಕ್ಕಮಗಳೂರು: ದನಗಳ್ಳರು ಹಸುವನ್ನು ಗಾಡಿಗೆ ತುಂಬಿಕೊಂಡು ಹೋಗುವಾಗ ಕರು ಅದೇ ಗಾಡಿಯ ಹಿಂದೆ ಓಡಿ ಹೋಗಿರುವ ಕರುಣಾಜನಕ ಘಟನೆ ನಡೆದಿದೆ.

ತಾಲೂಕಿನ ತೇಗೂರಿನಲ್ಲಿ ಘಟನೆ ನಡೆದಿದ್ದು, ಅಮ್ಮನನ್ನು ಕದ್ದೊಯ್ದ ಕಳ್ಳರ ಕಾರಿನ ಹಿಂದೆ ಕರು ಓಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂಕ ಪ್ರಾಣಿಯ ಅಮ್ಮನ ಪ್ರೀತಿ ಅನಾವರಣಗೊಂಡಿದೆ. ತಾಯಿಗಾಗಿ ಕರು ಓಡುವ ದೃಶ್ಯ ಕರುಳು ಹಿಂಡುವಂತಿದೆ. ಅಂಬಾ, ಅಂಬಾ ಎನ್ನು ಸುಮಾರು ದೂರ ಕಾರಿನ ಹಿಂದೆಯೇ ಓಡುತ್ತದೆ. ಆದರೆ ಕಟುಕರು ಮಾತ್ರ ಇದಾವುದನ್ನು ಲೆಕ್ಕಿಸದೆ ಹಸುವನ್ನು ಹೊತ್ತೊಯ್ಯುತ್ತಾರೆ.

ಮಲೆನಾಡು ಭಾಗದಲ್ಲಿ ದನಗಳ್ಳರ ಹಾವಳಿ ವ್ಯಾಪಕವಾಗಿದೆ. ರಸ್ತೆ ಬದಿಯಲ್ಲಿರುವ ದನಗಳನ್ನು ಕ್ಸೈಲೋ, ಸ್ಕಾರ್ಪಿಯೋ ನಂತಹ ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಾರೆ. ಇಷ್ಟು ದಿನ ರಸ್ತೆ ಬದಿಯಲ್ಲಿದ್ದ ದನಗಳನ್ನು ಹೊತ್ತೊಯ್ಯುತ್ತಿದ್ದ ಕಳ್ಳರು, ಇದೀಗ ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನೂ ಬಿಡುತ್ತಿಲ್ಲ. ಹೀಗೆ ಮನೆಯ ಪಕ್ಕದಲ್ಲಿ ಕಟ್ಟಿದ್ದ ಹಸುವನ್ನು ಕಳ್ಳರು ಕದ್ದೋಯ್ದಿದ್ದಾರೆ. ಈ ವೇಳೆ ಕರು ಸ್ವಲ್ಪ ದೂರ ಓಡಿ, ನಂತರ ಮೂಕರೋಧನೆ ಅನುಭವಿಸಿದೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಸುವನ್ನ ಗಾಡಿಗೆ ತುಂಬುವ ರೀತಿ ಕೂಡ ಕರುಣೆಯೇ ಇಲ್ಲವೆಂಬಂತಿದೆ. ಕೆಲವರು ಇದೇ ರೀತಿ ಕದಿಯುವ ವೇಳೆ ಸಿಕ್ಕಿ ಬಿದ್ದಿದ್ದರು. ಇನ್ನೂ ಕೆಲವರು ದನವನ್ನು ಕಡಿದು ಮಾಂಸ ಸಾಗಿಸುವಾಗ ಸಿಕ್ಕಿಬಿದ್ದಿದ್ದರು. ಅಲ್ಲದೆ ಗಾಡಿಗಳು ಅಪಘಾತವಾಗಿ ಇನ್ನೂ ಕೆಲವರು ಸಿಕ್ಕಿಬಿದ್ದಿದ್ದಾರೆ. ಇಷ್ಟೆಲ್ಲ ಆದರೂ ಕಳ್ಳತನ ಮಾತ್ರ ಕಡಿಮೆಯಾಗಿಲ್ಲ. ರೈತರ ಹಸುಗಳು ನಿತ್ಯ ಮಾಯವಾಗುತ್ತಿವೆ.

Comments

Leave a Reply

Your email address will not be published. Required fields are marked *