ಅಮೆರಿಕದಲ್ಲಿ ಇವಿಎಂನಿಂದ ಚುನಾವಣೆ ನಡೆದಿದ್ರೆ ಟ್ರಂಪ್ ಸೋಲ್ತಿದ್ರಾ- ಕಾಂಗ್ರೆಸ್ ನಾಯಕ ಪ್ರಶ್ನೆ

ನವದೆಹಲಿ: ಸದಾ ವಿವಾದಾತ್ಮಕ ಟ್ವೀಟ್‍ಗಳಿಂದ ಹೆಚ್ಚು ಚರ್ಚೆ ಗ್ರಾಸವಾಗುವ ಕಾಂಗ್ರೆಸ್ ನಾಯಕ ಉದಿತ್ ರಾಜ್ ಈ ಬಾರಿಯೂ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಇವಿಎಂ ಕುರಿತು ಟ್ವೀಟ್ ಮಾಡಿ ಸಂಶಯ ವ್ಯಕ್ತಪಡಿಸಿರುವ ಅವರು, ಅಮೆರಿಕದಲ್ಲಿ ಇವಿಎಂ ಮೂಲಕ ಚುನಾವಣೆ ನಡೆದಿದ್ದರೆ ಡೊನಾಲ್ಡ್ ಟ್ರಂಪ್ ಸೋಲುತ್ತಿದ್ದರೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಜಾಲತಾಣಗಳಲ್ಲಿ ಈ ಕುರಿತು ಇದೀಗ ಭಾರೀ ಚರ್ಚೆ ನಡೆಯುತ್ತಿದ್ದು, ಉದಿತ್ ರಾಜ್ ಅವರನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕಮೆಂಟ್ ಮಾಡುತ್ತಿದ್ದಾರೆ.

ಈ ಕುರಿತು ದಿಗ್ವಿಜಯ್ ಸಿಂಗ್ ಸಹ ಪ್ರತಿಕ್ರಿಯಿಸಿದ್ದು, ಇವಿಎಂಗಳನ್ನು ಟ್ಯಾಂಪರ್ ಪ್ರೋಫ್ ಮಾಡಲಾಗಿಲ್ಲ, ಆಯ್ದ ಕೆಲವನ್ನು ಮಾತ್ರ ಮಾಡಲಾಗಿದೆ. ಎಂತಹ ಪರಿಸ್ಥಿತಿಯಲ್ಲಿಯೂ ನಾವು ಕಳೆದುಕೊಳ್ಳಲಾರದ ಸ್ಥಾನಗಳನ್ನು ಸಾವಿರಾರು ಮತಗಳ ಅಂತರದಿಂದ ಸೋತಿದ್ದೇವೆ. ಈ ಕುರಿತು ಚರ್ಚಿಸಲು ನಾಳೆ ಸಭೆ ಕರೆಯಲಾಗಿದೆ. ಫಲಿತಾಂಶದ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನ ಚುನಾವಣೆಯಲ್ಲಿ ಇವಿಎಂ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಅನುಮಾನಿಸಿ ಹೇಳಿಕೆ ನೀಡಿದ್ದರು. ಚುನಾವಣಾ ಅಕ್ರಮದಲ್ಲಿ ಸುಪ್ರೀಂ ಕೋರ್ಟ್ ಕೂಡ ಭಾಗಿಯಾಗಿದೆಯೇ ಎಂದು ಪ್ರಶ್ನಿಸಿ ಉದಿತ್ ರಾಜ್ ವಿವಾದಕ್ಕೆ ಗುರಿಯಾಗಿದ್ದರು.

ಆಗ ಸಹ ಟ್ವೀಟ್ ಮಾಡುವ ಮೂಲಕ ದೂರಿದ್ದರು. ಸುಪ್ರೀಂಕೋರ್ಟ್ ಕೂಡ ಚುನಾವಣೆ ಅಕ್ರಮದಲ್ಲಿ ಭಾಗಿಯಾಗಿದೆ. ಎಲ್ಲ ಇವಿಎಂಗಳ ವಿವಿಪ್ಯಾಟ್‍ಗಳ ಸ್ಲಿಪ್‍ಗಳನ್ನು ಎಣಿಕೆ ಮಾಡಬೇಕೆಂಬ ವಿರೋಧ ಪಕ್ಷಗಳ ಮನವಿಯನ್ನು ತಿರಸ್ಕರಿಸಿದ್ದು ಯಾಕೆ? ಚುನಾವಣಾ ಅಕ್ರಮದಲ್ಲಿ ಸುಪ್ರೀಂ ಕೋರ್ಟ್ ಸಹ ಭಾಗಿಯಾಗಿದ್ಯಾ ಎಂದು ಪ್ರಶ್ನಿಸಿದ್ದರು.

ಉದಿತ್ ರಾಜ್ ಅವರು ತಮ್ಮ ಇಂಡಿಯನ್ ಜಸ್ಟಿಸ್ ಪಾರ್ಟಿ (ಐಜೆಪಿ)ಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರು. ಈ ಮೂಲಕ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಪಕ್ಷ ಅವರಿಗೆ ಟಿಕೆಟ್ ನೀಡಲಿಲ್ಲ. ಬದಲಾಗಿ ಪಂಜಾಬ್‍ನ ಜನಪದ ಹಾಗೂ ಸೂಫಿ ಗಾಯಕ ಹನ್ಸ್ ರಾಜ್ ಹಸ್ಸ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದಾಗಿ ಅಸಮಾಧಾನ ಹೊರ ಹಾಕಿದ ಉದಿತ್ ರಾಜ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

Comments

Leave a Reply

Your email address will not be published. Required fields are marked *