ಅಮಿತ್ ಶಾ ಪ್ರಸ್ತಾಪ ತಿರಸ್ಕರಿಸಿದ ಪ್ರತಿಭಟನಾ ನಿರತ ರೈತರು

ನವದೆಹಲಿ: ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರಸ್ತಾಪವನ್ನ ತಿರಸ್ಕರಿಸಿದ್ದು ತಮ್ಮ ನಿಲುವಿಗೆಗೆ ಬದ್ಧರಾಗಿದ್ದಾರೆ.

ಅಮಿತ್ ಶಾ ಪ್ರತಿಭಟನಾ ನಿರತ ರೈತರಿಗೆ ವೀಡಿಯೋ ಮೂಲಕ ಸಂದೇಶ ರವಾನಿಸಿದ್ದರು. ಡಿಸೆಂಬರ್ 3ರಂದು ನಿಮ್ಮ ಜೊತೆ ಮಾತುಕತೆ ನಡೆಸಲಾಗುವುದು. ಮಾತುಕತೆ ಇಚ್ಛಿಸಿದಲ್ಲಿ ಎಲ್ಲರೂ ದೆಹಲಿ-ಹರಿಯಾಣ ಗಡಿಯಿಂದ ಬುರಾಡಿತ ನಿರಂಕಾರಿ ಮೈದಾನಕ್ಕೆ ತೆರಳಬೇಕೆಂದು ಷರತ್ತು ವಿಧಿಸಿದ್ದರು. ಇದಕ್ಕೂ ಮೊದಲು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಮಾತುಕತೆಗೆ ಆಹ್ವಾನಿಸಿದ್ದರು.

ಅಮಿತ್ ಶಾ ಮತ್ತು ನರೇಂದ್ರ ತೋಮರ್ ಪ್ರಸ್ತಾಪ ತಿರಸ್ಕರಿಸಿದ ಬಳಿಕ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸಿದ್ದಾರೆ. ಅಮಿತ್ ಶಾ ತಮ್ಮ ಸಂದೇಶದಲ್ಲಿ ಬುರಾಡಿ ಮೈದಾನಕ್ಕೆ ತೆರಳಬೇಕೆಂಬ ಷರತ್ತು ವಿಧಿಸಿದ್ದಾರೆ. ಕೇಂದ್ರದ ವಿರುದ್ಧ ಪ್ರತಿಭಟನೆ ರಾಮಲೀಲಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಹಾಗಾಗಿ ಪ್ರತಿಭಟನಾ ಸ್ಥಳ ಬದಲಿಸಲು ಸಾಧ್ಯವಿಲ್ಲ. ಸರ್ಕಾರ ಮೂರು ಕೃಷಿ ಕಾನೂನುಗಳನ್ನ ಹಿಂಪಡೆದುಕೊಳ್ಳುವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಪಂಜಾಬ್ ಕಿಸಾನ ಯೂನಿಯನ್ ಅಧ್ಯಕ್ಷ್ಯ ರೂಲ್ದೂ ಸಿಂಗ್ ಹೇಳಿದ್ದಾರೆ.

ಮೋದಿ ಸರ್ಕಾರ ಜಾರಿಗೆ ತಂದಿರೋ ವಿವಿಧ ಕೃಷಿ ಮಸೂದೆ ವಿರೋಧಿಸಿ ದೆಹಲಿ ಚಲೋ ಆಂದೋಲನ ನಡೆಸುತ್ತಿರುವ ರೈತರ ವಿರುದ್ಧ ಹರಿಯಾಣ ಪೊಲೀಸರು ಕೊಲೆ ಯತ್ನ, ಗಲಭೆ ಸೃಷ್ಟಿ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ.

ಇನ್ನು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಮಂದಿ ರೈತರು ಸಿಂಗು ಗಡಿಯಲ್ಲಿ ಜಮಾಯಿಸಿದ್ದು, ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇಲ್ಲಿಂದ ವಾಪಸ್ ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾರೆ. ದೆಹಲಿ-ಎನ್ ಸಿಆರ್ ನಗರಗಳ ಮಧ್ಯೆ ವಾಹನ ಸಂಚಾರ ತೀವ್ರ ಅಡಚಣೆಯುಂಟಾಗಿದೆ. ಹರ್ಯಾಣದ ಗಡಿಭಾಗದ ಸಿಂಗು, ಟಿಕ್ರಿ, ಧನ್ಸ, ಜಾರೊಡ ಕಲನ್‍ಗಳಲ್ಲಿ ಪೊಲೀಸರು ಸಂಚಾರ ಬಂದ್ ಮಾಡಿದ್ದಾರೆ.

ಈ ಮಧ್ಯೆ, ನಮ್ಮ ರೈತರು ಇಲ್ಲ. ಪಂಜಾಬ್ ಸರ್ಕಾರವೇ ಇದಕ್ಕೆ ಕಾರಣ ಅಂತ ಹರ್ಯಾಣ ಸಿಎಂ ಮನೋಹರ್‍ಲಾಲ್ ಖಟ್ಟರ್ ಟೀಕಿಸಿದ್ದಾರೆ. ಇದಕ್ಕೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಿರುಗೇಟು ಕೊಟ್ಟಿದ್ದು, ನಿಮ್ಮ ವರ್ತನೆಯಿಂದಾಗಿ ನಿಮ್ಮ ಫೋನ್ ಕಾಲ್ ಅನ್ನು ನಾನು ಸ್ವೀಕರಿಸಲ್ಲ ಅಂದಿದ್ದಾರೆ.

Comments

Leave a Reply

Your email address will not be published. Required fields are marked *